ಪ್ರತ್ಯೇಕ ಉತ್ತರ ಕರ್ನಾಟಕ ಮಾತು ಕೂಡ ಸರಿ ಅಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ರಾಜಕಾರಣ ಪಕ್ಕಕ್ಕಿಟ್ಟು ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ಅಧಿವೇಶನದಲ್ಲಿ ಚಿಂತನೆ ಮಾಡೋಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: “ಎಲ್ಲಾ ಪಕ್ಷಗಳ ಶಾಸಕರು ತಮ್ಮ ರಾಜಕಾರಣ ಪಕ್ಕಕ್ಕಿಟ್ಟು ಕಿತ್ತೂರು ಕರ್ನಾಟಕ ಅಭಿವೃದ್ಧಿ ಪರವಾದ ಚಿಂತನೆಯನ್ನು ಹತ್ತು ದಿನಗಳ ಅಧಿವೇಶನದಲ್ಲಿ ಮಾಡಬೇಕು” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೋರಿದರು.
ಸುವರ್ಣ ವಿಧಾನಸೌಧ ಬಳಿ ಭಾನುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, “ಕಿತ್ತೂರು ಕರ್ನಾಟಕ ಏಳಿಗೆ ಮತ್ತು ಅಭಿವೃದ್ಧಿ ಕಡೆಗೆ ಆಡಳಿತ, ವಿಪಕ್ಷದ ಎಲ್ಲ ಶಾಸಕರು ವಿಚಾರ ಮಾಡಬೇಕು. ಆ ನಿಟ್ಟಿನಲ್ಲಿ ಎಲ್ಲರ ಮೇಲೂ ಜವಾಬ್ದಾರಿ ಇದೆ. ನಮ್ಮ ಭಾಗ ಬಹಳಷ್ಟು ಹಿಂದುಳಿದಿದೆ. ಈ ಬಗ್ಗೆ ನಮಗೂ ಅರಿವಿದೆ. ಸಾಕಷ್ಟು ನೀರಾವರಿ ಯೋಜನೆಗಳು ಬರಬೇಕು. ಹೆಚ್ಚಿನ ಅನುದಾನ ಈ ಭಾಗಕ್ಕೆ ಬರಬೇಕಿದೆ” ಎಂದರು.ಅಖಂಡ ಕರ್ನಾಟಕದ ಚಿಂತನೆಯನ್ನು ನಾವೆಲ್ಲಾ ಹೊಂದಿರಬೇಕು. ಅಖಂಡ ಕರ್ನಾಟಕ ನಮ್ಮ ಹೆಮ್ಮೆ. ಇಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎನ್ನುವ ಪ್ರಶ್ನೆ ಬರುವುದಿಲ್ಲ. ಪ್ರತ್ಯೇಕ ಉತ್ತರ ಕರ್ನಾಟಕ ಮಾತು ಕೂಡ ಸರಿ ಅಲ್ಲ. ಕಿತ್ತೂರು ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಾವೆಲ್ಲಾ ಕೈ ಜೋಡಿಸೋಣ, ಗಮನಹರಿಸೋಣ” ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.


