
ಕಿತ್ತೂ ರು: ಅ.23 ರಿಂದ 25 ರವರೆಗೆ ಜರುಗುವ ಐತಿಹಾಸಿಕ ಚನ್ನಮ್ಮಾಜಿಯ ಕಿತ್ತೂರು ಉತ್ಸವಕ್ಕೆ ಕಿತ್ತೂರು ಪಟ್ಟಣ ಸಜ್ಜಾಗಿದ್ದು, ಮಳೆಯ ನಡುವೆಯೂ ಸಿದ್ಧತೆಗಳು ಭರದಿಂದ ಸಾಗಿವೆ. ಉದ್ಘಾಟನೆ ಮತ್ತು ಸಮಾರೋಪ ಸಮಾರಂಭ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಕೋಟೆ ಆವರಣದಲ್ಲಿರುವ ರಾಣಿ ಚನ್ನಮ್ಮ ಮುಖ್ಯ ವೇದಿಕೆ ಸಿದ್ಧಗೊಂಡಿದ್ದು 180×300 ಅಡಿ ಅಳತೆಯ ವಾಟರ್‌ಪ್ರೂಫ್ ಪೆಂಡಾಲ್ ಸಿದ್ಧವಾಗಿದೆ.
ಅಂದಾಜು 12,000 ಆಸನ ವ್ಯವಸ್ಥೆ ಮಾಡಲಾಗಿದ್ದು, ವೇದಿಕೆ ಮುಂಭಾಗದಲ್ಲಿ ರಾಜಕೀಯ ಮುಖಂಡರು, ವಿಐಪಿಗಳು, ಸಾಧು-ಸಂತರು, ಮಾಧ್ಯಮದವರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಲ್ಲಿ ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ ಎಂದು ಮುರಗೋಡ ಪೆಂಡಾಲ್ ಮತ್ತು ಡೆಕೋರೇಟರ್‌ನ ಮಾಲೀಕ ಕೃಷ್ಣಾ ಬಾಳೇಕುಂದರಗಿ ತಿಳಿಸಿದ್ದಾರೆ. ವೇದಿಕೆ ಹಿಂಬಾಗದಲ್ಲಿ ಮಾಧ್ಯಮ ಕೇಂದ್ರ ತೆರೆಯಲಾಗಿದೆ.
ಮದುವಣಗಿತ್ತಿಯಂತೆ ಶೃಂಗಾರ: ಪಟ್ಟಣದ ಮುಖ್ಯ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಕಿತ್ತೂರು ಚನ್ನಮ್ಮಾಜಿಯ ಸಾಹಸಗಾಥೆಯ ಚಿತ್ರಗಳನ್ನು ಕಲಾವಿದರು ಬಿಡಿಸಿದ್ದಾರೆ. ಕೋಟೆ ಆವರಣದಲ್ಲಿರುವ ಎಲ್ಲ ಸ್ಮಾರಕಗಳಿಗೆ ವಿದ್ಯುತ್ ಅಲಂಕಾರ ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೇರಿದಂತೆ ಸಚಿವರು, ಸಂಸದರು, ಶಾಸಕರು, ಶ್ರೀಗಳು ಭಾಗವಹಿಸಲಿದ್ದು, ಇವರೆಲ್ಲರ ಸ್ವಾಗತಕ್ಕೆ ಕಿತ್ತೂರು ಪಟ್ಟಣ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.
ಕಿತ್ತೂರು ಪ್ರವೇಶಿಸುವ ನಾಲ್ಕೂ ದಿಕ್ಕುಗಳಲ್ಲಿ ಸ್ವಾಗತ ಕಮಾನು ನಿರ್ಮಿಸಲಾಗಿದೆ. ಮಳೆಯ ನಡುವೆಯೂ ಭರದ ಸಿದ್ಧತೆ ಮಾಡಲಾಗುತ್ತಿದ್ದು, ನಾಡಿನ ಹೆಸರಾಂತ ಸಾಹಿತಿಗಳು, ಕಲಾವಿದರು, ನಟರು, ರಾಜ್ಯ-ರಾಷ್ಟ್ರಮಟ್ಟದ ನೃತ್ಯ
ಕಲಾವಿದರು ಭಾಗವಹಿಸಲಿದ್ದಾರೆ.