
ಯಾದಗಿರಿ: ಭೂಮಿಯ ಮಾಲಿಕತ್ವಕ್ಕೆ ಸಂಬಂಧಿಸಿದಂತೆ ನಕಲಿ ಮುಟೇಶನ್ (Mutation) ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಸೀಲ್ ಹಾಗೂ ಮೊಹರುಗಳನ್ನು ದುರುಪಯೋಗಪಡಿಸಿಕೊಂಡು ವಂಚನೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರೊಬ್ಬರು ಸೇರಿದಂತೆ ಮೂವರ ವಿರುದ್ಧ ಜಿಲ್ಲೆಯ ಸುರಪುರ (ಶೋರಾಪೂರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರಪುರ ತಾಲೂಕಿನ ತಿಮ್ಮಾಪುರ ಕಾಲೋನಿಯ ನಿವಾಸಿ ಅಶೋಕ ಸಜ್ಜನ್ (58) ಅವರು ನೀಡಿದ ದೂರಿನ ಮೇರೆಗೆ, ಬಸವರಾಜ ಸಜ್ಜನ್, ಸುರೇಶ ಸಜ್ಜನ್ ಹಾಗೂ ಪ್ರಕಾಶ ಸಜ್ಜನ್ ಎಂಬವರ ವಿರುದ್ಧ ಐಪಿಸಿ ಕಲಂಗಳು 464, 465, 468, 471 ಮತ್ತು 420 ಅಡಿ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನಕಲಿ ದಾಖಲೆಗಳ ಆರೋಪ : ದೂರುದಾರರ ಪ್ರಕಾರ, ವಣಕಿಹಾಳ ಗ್ರಾಮದ ಸರ್ವೆ ನಂ. 86/1 ಹಾಗೂ ಹಸನಾಪುರ ಗ್ರಾಮದ ಸರ್ವೆ ನಂ. 44/1, 44/5, 44/6 ಮತ್ತು 44/7ಗೆ ಸಂಬಂಧಿಸಿದಂತೆ 1996ರ ಮುಟೇಶನ್ ನಂ. 28 ಮತ್ತು 30ರ ದಾಖಲೆಗಳನ್ನು ಆರೋಪಿತರು ನಕಲಿಯಾಗಿ ತಯಾರಿಸಿ, ಅವುಗಳನ್ನು ನೈಜ ದಾಖಲೆಗಳೆಂದು ತೋರಿಸಿ ವಿವಿಧ ಹಂತಗಳಲ್ಲಿ ಸಲ್ಲಿಸಿದ್ದಾರೆ. ಅಲ್ಲದೇ ಈ ಮುಟೇಶನ್ ದಾಖಲೆಗಳಲ್ಲಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ಸಂಬಂಧಿತ ಅಧಿಕಾರಿಗಳ ಸಹಿ ಇಲ್ಲದೇ, ಸರ್ಕಾರಿ ಕಚೇರಿಗಳ ಸೀಲ್ – ಮೊಹರುಗಳನ್ನು ದುರುಪಯೋಗಪಡಿಸಿಕೊಂಡು ದಾಖಲೆಗಳನ್ನು ತಯಾರಿಸಲಾಗಿದೆ ಎಂದು ಸಹ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಮಾನ್ಯ ಜಿಲ್ಲಾಧಿಕಾರಿ ಹಾಗೂ ಸುರಪುರ ತಹಶೀಲ್ದಾರರ ಮಟ್ಟದಲ್ಲಿ ನಡೆದ ಪರಿಶೀಲನೆಗಳಲ್ಲಿ, ಸಲ್ಲಿಸಲಾದ ಮುಟೇಶನ್ ದಾಖಲೆಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಹೆಸರಿನಲ್ಲಿ ನೀಡಲಾಗಿದೆ ಎನ್ನಲಾದ ನಕಲು ಪ್ರತಿಗಳು ನೈಜವಲ್ಲ, ಕೊಟ್ಟಿ ತಯಾರಿಸಿದ ದಾಖಲೆಗಳು ಎಂಬುದು ಸ್ಪಷ್ಟವಾಗಿದೆ. ಅಲ್ಲದೇ ತಹಶೀಲ್ದಾರರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ವರದಿಗಳಲ್ಲಿ 1993–94 ರಿಂದ 1997–98ರ ಪಹಣಿ ಪತ್ರಿಕೆಗಳ ಕಾಲಂ ಸಂಖ್ಯೆ 9 ರಲ್ಲಿಯೂ ಯಾವುದೇ ಕಾನೂನುಬದ್ಧ ದಾಖಲೆ ಇಲ್ಲದೇ ಹೆಸರು ನಮೂದಿಸಿರುವುದು ಪತ್ತೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಎಲ್ಲಾ ದಾಖಲೆಗಳು ಹಾಗೂ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಉತ್ತರಗಳ ಆಧಾರದಲ್ಲಿ, ಆರೋಪಿತರು ಉದ್ದೇಶಪೂರ್ವಕವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ಕುಟುಂಬದ ಆಸ್ತಿಗೆ ಹಾನಿ ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಈ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ. 464, 465, 468, 471 ಮತ್ತು 420 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

