
ಬೆಳಗಾವಿ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಯುವಕನಿಗೆ ಇಲ್ಲಿನ ಪೋಕ್ಸೊ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ.
ಗೋಕಾಕ ತಾಲ್ಲೂಕಿನ ಕೊಳವಿಯ ಕೆಂಪಣ್ಣ ರಾಮಪ್ಪ ಹರಿಜನ (29) ಶಿಕ್ಷೆಗೆ ಒಳಗಾದವ.
ಮದುವೆಯಾಗುವುದಾಗಿ ನಂಬಿಸಿದ ಈತ, 2018ರ ನ.14ರಂದು ಬಾಲಕಿ ಕರೆದೊಯ್ದು ಅತ್ಯಾಚಾರ ಎಸಗಿದ್ದ.
ಅವಳ ಪಾಲಕರು ಬುದ್ಧಿವಾದ ಹೇಳಿದರೂ ಸುಮ್ಮನಾಗದೆ, ಬಾಲಕಿ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ದ. ಈ ಸಂಬಂಧ ಪಾಲಕರು ಗೋಕಾಕ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖಾಧಿಕಾರಿ ಎಸ್.ವಿ. ಸಾತಾರೆ ಅವರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ, ತೀರ್ಪು ಪ್ರಕಟಿಸಿದರು. ಸಂತ್ರಸ್ತೆಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ₹1 ಲಕ್ಷ ಪರಿಹಾರ ಪಡೆಯುವಂತೆ ಆದೇಶಿಸಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ.ಪಾಟೀಲ ವಾದ ಮಂಡಿಸಿದ್ದರು