ರಾಜಕೀಯರಾಜ್ಯ

ದರ್ಶನ್‌ಗೆಹೈಕೋರ್ಟ್‌ ಷರತ್ತುಬದ್ದ ಜಾಮೀನು ಮಂಜೂರು

ಬೆಂಗಳೂರು,ಅ.30- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 2ನೇ ಆರೋಪಿಯಾಗಿದ್ದ ನಟ ದರ್ಶನ್‌ಗೆ ಚಿಕಿತ್ಸೆ ಪಡೆಯಲು ಹೈಕೋರ್ಟ್‌ ಆರು ವಾರಗಳ ಕಾಲ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಕಳೆದ ಜೂ.11ರಂದು ಮೈಸೂರಿನಲ್ಲಿ ಬಂಧನಕ್ಕೊಳಪಟ್ಟಿದ್ದ ದರ್ಶನ್‌ ಅಲ್ಲಿಂದ ಈವರೆಗೆ ಅಂದರೆ 131 ದಿನಗಳ ಕಾಲ ಬೆಂಗಳೂರಿನ ಪರಪ್ಪನ ಅಗ್ರಹಾರ ಹಾಗೂ ಬಳ್ಳಾರಿ ಜೈಲಿನಲ್ಲಿದ್ದರು.

ಇದೀಗ ಹೈಕೋರ್ಟ್‌ ಷರತ್ತುಬದ್ದ ಜಾಮೀನು ಮಂಜೂರು ಮಾಡಿದ್ದು, ಬಹುತೇಕ ಸಂಜೆಯೊಳಗೆ ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ವಾದ-ವಿವಾದ ಆಲಿಸಿ ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಿದ ಹೈಕೋರ್ಟ್‌ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಸ್‌‍.ವಿಶ್ವಜೀತ್‌ ಶೆಟ್ಟಿ ಅವರ ಪೀಠ ಹಲವು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿತು.

ದರ್ಶನ್‌ ಅವರ ಪಾಸ್‌‍ಪೋರ್ಟ್‌ನ್ನು ನ್ಯಾಯಾಲಯಕ್ಕೆ ತಕ್ಷಣವೇ ಒಪ್ಪಿಸುವುದು, ಅವರು ಇಚ್ಛಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು, ಒಂದು ವಾರದ ಚಿಕಿತ್ಸಾ ವಿವರವನ್ನು ನ್ಯಾಯಾಲಯಕ್ಕೆ ಸಲ್ಲಿಸುವುದು ಸೇರಿದಂತೆ ಕೆಲವು ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿತು.
ನ್ಯಾಯಾಲಯದ ಆದೇಶದ ಪ್ರತಿಗಳನ್ನು ಬಳ್ಳಾರಿ ಜೈಲಿನ ಅಧೀಕ್ಷಕರಿಗೆ ಸಲ್ಲಿಸಿದ ಬಳಿಕ ಬಿಡುಗಡೆಯಾಗಲಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 2ನೇ ಆರೋಪಿಯಾಗಿದ್ದ ದರ್ಶನ್‌ ಹಾಗೂ ಇತರ ಆರೋಪಿಗಳನ್ನು ಬೆಂಗಳೂರಿನ ವಿಜಯನಗರ ಪೊಲೀಸ್‌‍ ಠಾಣೆ ಎಸಿಪಿ ಚಂದನ್‌ ನೇತೃತ್ವದ ತಂಡ ಮೈಸೂರಿನಲ್ಲಿ ಬಂಧಿಸಿತ್ತು. 11 ದಿನಗಳ ಕಾಲ ಪೊಲೀಸರ ವಶದಲ್ಲಿದ್ದ ಅವರನ್ನು ವಿಚಾರಣೆ ನಡೆಸಿದ ಬಳಿಕ ಜೂ.22ಕ್ಕೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button