
ಹಂದಿಗುಂದ: ‘ಗುರು ಪರಂಪರೆ ಮತ್ತು ವಿರಕ್ತ ಪರಂಪರೆ ಸಮಾಜದ ಎರಡು ಕಣ್ಣುಗಳಿದ್ದಂತೆ. ಭಕ್ತರ ಉದ್ಧಾರವೇ ಎರಡು ಪರಂಪರೆಗಳ ಉದ್ದೇಶವಾಗಿದೆ’ ಎಂದು ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೀರಭದ್ರೇಶ್ವರ ಮತ್ತು ಕಾಳಿಕಾದೇವಿ ದೇವಸ್ಥಾನಗಳ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
‘ದೇವರು ಎಲ್ಲ ಕಡೆ ಇದ್ದಾನೆ. ಮೂರ್ತಿಗಳ ಮೂಲಕ ನಮಗೆ ಗೋಚರಿಸುತ್ತಾನೆ. ಹಾಗಾಗಿ ನಾವು ದೇವಸ್ಥಾನ ಕಟ್ಟಿಸಿ, ಮೂರ್ತಿ ಪ್ರತಿಷ್ಠಾಪಿಸುವ ಪದ್ಧತಿ ಪ್ರಾಚೀನ ಕಾಲದಿಂದ ನಡೆದುಕೊಂಡು ಬಂದಿದೆ. ಭಾರತದಲ್ಲಿ ಇರುವಷ್ಟು ದೇವಸ್ಥಾನಗಳು ಬೇರೆ ಯಾವ ದೇಶದಲ್ಲೂ ಇಲ್ಲ’ ಎಂದರು.
‘ವಕ್ಫ್ ಮಂಡಳಿಯು ರೈತರು ಹಾಗೂ ದೇವಾಲಯಗಳ ಜಮೀನಿಗೆ ತನ್ನ ಹೆಸರು ಸೇರಿಸುತ್ತಿರುವುದು ಸರಿಯಲ್ಲ. ರೈತರ ಜಮೀನನ್ನು ಅವರಿಗೇ ಮರಳಿಸಬೇಕು’ ಎಂದು ಆಗ್ರಹಿಸಿದರು.