
ನವಲಗುಂದ: ಸರ್ಕಾರ ಹೆಣ್ಣುಮಕ್ಕಳಿಗಾಗಿ ಪ್ರಧಾನ ಮಂತ್ರಿ ಮಾತೃ ವಂದನಾ, ಮಡಿಲು ಕಿಟ್, ನಗು ಮಗು, ಭಾಗ್ಯಲಕ್ಷ್ಮಿ, ಸುಕನ್ಯಾ ಸಮೃದ್ಧಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಹಿರಿಯ ಸೆಷನ್ಸ್ ನ್ಯಾಯಾಧೀಶ ಮಂಜುನಾಥ ಪಿ.
ಪಾನಘಂಟಿ ಹೇಳಿದರು.
ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಶಿಶು ಅಭಿವೃದ್ಧಿ ಯೋಜನೆ, ತಾಲ್ಲೂಕಾ ಕಾನೂನು ಸೇವಾ ಸಮಿತಿ ಹಾಗೂ ತಾಲ್ಲೂಕು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬೇಟಿ ಬಚಾವೊ ಬೇಟಿ ಪಡಾವೊ ಕಾರ್ಯಕ್ರಮದಡಿ ನ.5 ರಂದು ಜನಿಸಿದ ಹೆಣ್ಣು ಮಕ್ಕಳ ತಾಯಂದಿರಿಗೆ ಪ್ರೋತ್ಸಾಹ ನೀಡಲು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸೆಷನ್ಸ್ ನ್ಯಾಯಾಧೀಶ ನವೀನ ಎಫ್. ಡಿಸೊಜಾ ಮಾತನಾಡಿ, ಹೆಣ್ಣು ಮತ್ತು ಗಂಡು ಎಂಬ ತಾರತಮ್ಯ ಮಾಡದೆ ಸಮಾನ ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.
ಇದೆ ವೇಳೆ ಹೆಣ್ಣು ಮಕ್ಕಳ ತಾಯಂದಿರಿಗೆ ಸಿಹಿ ಹಾಗೂ ತೆಂಗಿನ ಸಸಿ ನೀಡಿ ಅಭಿನಂದಿಸಲಾಯಿತು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿದೇವಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ವೈದ್ಯಾಧಿಕಾರಿ ರೂಪಾ ಕಿಣಗಿ, ವಕೀಲರ ಸಂಘದ ಅಧ್ಯಕ್ಷ ಪಿ.ಎಚ್. ಕೋನರಡ್ಡಿ, ಸ್ತ್ರೀರೋಗ ತಜ್ಞರಾದ ಬಿ.ಎಸ್. ಮಾಶಾ ಇದ್ದರು.