
ಹುಬ್ಬಳ್ಳಿ: ‘ಪ್ರಸ್ತುತ ವರ್ಷ ಕರ್ನಾಟಕ ರಾಜ್ಯೋತ್ಸವ(ನ.1) ದಿನದಂದೇ ದೀಪಾವಳಿ ಅಮಾವಾಸ್ಯೆ ಬಂದಿದ್ದು, ಹಬ್ಬದ ಪ್ರಯುಕ್ತ ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಳ್ಳಲಾಗುವ ರಾಜ್ಯೋತ್ಸವದ ವೇದಿಕೆ ಕಾರ್ಯಕ್ರಮವನ್ನು ಮುಂದೂಡಲು ಚಿಂತನೆ ನಡೆಸಲಾಗಿದೆ’ ಎಂದು ಮೇಯರ್ ರಾಮಪ್ಪ ಬಡಿಗೇರ ಹೇಳಿದರು.
‘ಈ ಕುರಿತು ಅಕ್ಟೋಬರ್ 15ರಂದು ಸಂಜೆ 5ಕ್ಕೆ ಮಹಾನಗರ ಪಾಲಿಕೆ ಮೇಯರ್ ಕಚೇರಿಯಲ್ಲಿ ಸರ್ವಪಕ್ಷಗಳ ಮುಖಂಡರ ಸಭೆ ಕರೆದು, ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನ. 1ರಂದೇ ನಡೆಸಲಾಗುವುದು’ ಎಂದು ಸೋಮವಾರ ಪಾಲಿಕೆ ಆಯುಕ್ತರ ಸಭಾಭವನದಲ್ಲಿ ಪೂರ್ವಭಾವಿ ಸಭೆ ಬಳಿಕ ಮಾಧ್ಯಮದವರಿಗೆ ಮಾಹಿತಿ ನೀಡಿದರು.
‘ಪಾಲಿಕೆ ವ್ಯಾಪ್ತಿಯ ಪ್ರಮುಖ ಸ್ಥಳದಲ್ಲಿ ಶಾಶ್ವತವಾಗಿ ಕನ್ನಡ ಧ್ವಜ ಹಾರಾಡುವಂತೆ ಮಾಡಬೇಕು ಎಂದು ಕೆಲವು ಕನ್ನಡ ಸಂಘಟನೆಯ ಮುಖಂಡರು ಸಲಹೆ- ಸೂಚನೆಗಳನ್ನು ನೀಡಿದ್ದಾರೆ. ವಿವಿಧ ಪಕ್ಷಗಳ ಸದಸ್ಯರ ಸಲಹೆ ಮೇರೆಗೆ, ಸೂಕ್ತ ಸ್ಥಳ ಗುರುತಿಸಿ ಪ್ರಸ್ತುತ ವರ್ಷದಿಂದಲೇ ಬಾವುಟ ಹಾರಿಸಲಾಗುವುದು’ ಎಂದರು.