
ಹುಬ್ಬಳ್ಳಿ: ಮಹಾರಾಷ್ಟ್ರ, ಝಾರ್ಖಂಡ್ ವಿಧಾನಸಭಾ ಚುನಾವಣೆ ಕಾವು ಕರ್ನಾಟಕವನ್ನೂ ಆವರಿಸಿದ್ದು, ತೀವ್ರ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕರ್ನಾಟಕ ಸರಕಾರವು ಮದ್ಯ ಉದ್ಯಮಿಗಳಿಂದ 700 ಕೋಟಿ ರೂ. ಲೂಟಿ ಮಾಡಿ ಆ ಹಣವನ್ನು ಮಹಾರಾಷ್ಟ್ರ ಚುನಾವಣೆಗೆ ಬಳಸುತ್ತಿದೆ ಎಂಬ ಪ್ರಧಾನಿ ಮೋದಿ ಅವರ ಆರೋಪದ ವಿರುದ್ಧ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.
ಶಿವಕುಮಾರ್ ಸಹಿತ ರಾಜ್ಯ ಕಾಂಗ್ರೆಸ್ನ ಹಲವು ನಾಯಕರು ಮುಗಿಬಿದ್ದಿದ್ದಾರೆ. ಆರೋಪ ಸಾಬೀತುಪಡಿಸಿ ಇಲ್ಲವೇ ರಾಜಕೀಯ ನಿವೃತ್ತಿ ಪಡೆಯಿರಿ ಎಂದು ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
“ಮೋದಿಯವರೇ, ನಮ್ಮ ಸರಕಾರದ ಮೇಲೆ ನೀವು ಮಾಡಿದ 700 ಕೋಟಿ ರೂ. ವಸೂಲಿ ಆರೋಪವನ್ನು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಸಾಬೀತು ಪಡಿಸದಿದ್ದರೆ ನೀವು ರಾಜಕೀಯ ನಿವೃತ್ತಿ ಪಡೆಯುತ್ತೀರಾ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಚಿವ ಪ್ರಿಯಾಂಕ್ ಖರ್ಗೆ ಸಹಿತ ಹಲವು ನಾಯಕರು ಕೂಡ ಮೋದಿ ವಿರುದ್ಧ ಕಿಡಿಕಾರಿದ್ದಾರೆ.