NEET ಆಕಾಂಕ್ಷಿ ಅಪ್ರಾಪ್ತೆಯನ್ನು ಒತ್ತೆಯಾಳಾಗಿ ಇರಿಸಿ ಆರು ತಿಂಗಳ ಕಾಲ ರೇ*ಪ್!

ಕಾನ್ಪುರ: ಉತ್ತರಪ್ರದೇಶದ ಪ್ರಮುಖ ಕೋಚಿಂಗ್ ಇನ್ಸ್ಟಿಟ್ಯೂಟ್ನಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಾಗಲು ಬಂದಿದ್ದ ಫತೇಪುರದ ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿಯೊಬ್ಬಳನ್ನು ಆರು ತಿಂಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡು ಇಬ್ಬರು ಪ್ರಾಧ್ಯಾಪಕರು ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ಶನಿವಾರ(ನ9) ತಿಳಿಸಿದ್ದಾರೆ.
2022 ರ ಡಿಸೆಂಬರ್ನಲ್ಲಿ ನಗರದ ಹಾಸ್ಟೆಲ್ನಲ್ಲಿ ಓದುತ್ತಿದ್ದಾಗ ವಿದ್ಯಾರ್ಥಿನಿಗೆ ಕಿರುಕುಳ ಪ್ರಾರಂಭವಾಗಿತ್ತು.ಕಲ್ಯಾಣಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ ನಂತರ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಅಭಿಷೇಕ್ ಪಾಂಡೆ ತಿಳಿಸಿದ್ದಾರೆ.
ಆರೋಪಿಗಳಾದ ಇಬ್ಬರೂ ಪ್ರಾಧ್ಯಾಪಕರು ಜೀವಶಾಸ್ತ್ರವನ್ನು ಪಾಠ ಮಾಡುತ್ತಿದ್ದ ಸಾಹಿಲ್ ಸಿದ್ದಿಕಿ ಮತ್ತು ರಸಾಯನಶಾಸ್ತ್ರ ಕಲಿಸುತ್ತಿದ್ದ ವಿಕಾಸ್ ಪೋರ್ವಾಲ್ ಎಂಬವರಾಗಿದ್ದಾರೆ. ಅತ್ಯಾಚಾರ, ಅಕ್ರಮ ಬಂಧನ, ಕ್ರಿಮಿನಲ್ ಬೆದರಿಕೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೋ) ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಬಂಧಿಸಿ ಆರೋಪ ಹೊರಿಸಲಾಗಿದೆ. ಈ ಘಟನೆ ನಡೆದಾಗ ವಿದ್ಯಾರ್ಥಿನಿಗೆ 17 ವರ್ಷ ವಯಸ್ಸಾಗಿತ್ತು.
ಸಂತ್ರಸ್ತೆ ದೂರಿನಲ್ಲಿ, 2022 ರ ಡಿಸೆಂಬರ್ ನಲ್ಲಿ, ಸಿದ್ದಿಕಿ ತನ್ನನ್ನು ಕಲ್ಯಾಣಪುರದ ಮಕ್ಡಿ-ಖೇರಾ ಪ್ರದೇಶದಲ್ಲಿನ ತನ್ನ ಸ್ನೇಹಿತನ ಫ್ಲಾಟ್ಗೆ ಹೊಸ ವರ್ಷದ ಪಾರ್ಟಿಗೆ ಆಹ್ವಾನಿಸಿದ್ದು, ಇತರ ವಿದ್ಯಾರ್ಥಿಗಳು ಸಹ ಬರುತ್ತಾರೆ ಎಂದಿದ್ದ ಆದರೆ ಫ್ಲಾಟ್ಗೆ ಹೋದಾಗ ತಂಪು ಪಾನೀಯದಲ್ಲಿ ನಿದ್ರಾಜನಕ ಬೆರೆಸಿ ತನ್ನ ಮೇಲೆ ಅತ್ಯಾಚಾರ ನಡೆಸಿ ವಿಡಿಯೋ ರೆಕಾರ್ಡ್ ಮಾಡಿದ್ದಾನೆ ಎಂದು ಹೇಳಿಕೊಂಡಿದ್ದಾಳೆ.