ಹುಬ್ಬಳ್ಳಿ

ಫ್ಲೈ ಓವರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಣ ಒದಗಿಸಿದರೂ ಕಾಮಗಾರಿ ಇನ್ನೂ ಅರ್ಧದಷ್ಟೂ ಪೂರ್ಣಗೊಂಡಿಲ್ಲ; ನಿತೀನ್ ಗಡ್ಕರಿ

ನವದೆಹಲಿ/ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಹೃದಯ ಭಾಗದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಮಂದಗತಿಯಲ್ಲಿ ಸಾಗಿರುವ ಫ್ಲೈ ಓವರ್ ಕಾಮಗಾರಿ ಪ್ರಗತಿ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಅವರು ಬುಧವಾರ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದರು.

ನವದೆಹಲಿಯ ತಮ್ಮ ಕಚೇರಿಯಿಂದಲೇ ಧಾರವಾಡ ಸಂಸದರು ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಮ್ಮುಖದಲ್ಲಿಯೇ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಗಡ್ಕರಿ, ಫ್ಲೈಓವರ್ ಕಾಮಗಾರಿ ಪ್ರಗತಿಯ ಸಂಪೂರ್ಣ ಮಾಹಿತಿ ಪಡೆದು ತ್ವರಿತ ವೇಗ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸ್ಥಳೀಯ ಆಡಳಿತಕ್ಕೆ ಗಡ್ಕರಿ ಚಾಟಿ: ವಾಣಿಜ್ಯ ನಗರಿ ಹುಬ್ಬಳ್ಳಿ ಹೃದಯ ಭಾಗದಲ್ಲಿ ನಿರ್ಮಿಸುತ್ತಿರುವ 3.61 ಕಿ.ಮೀ ವಿಸ್ತೀರ್ಣದ ಈ ಎಲಿವೇಟೆಡ್ ರಸ್ತೆ (ಎತ್ತರದ ಕಾರಿಡಾರ್) ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅಗತ್ಯ ಅನುದಾನ ನೀಡುತ್ತಿದ್ದರೂ ಕಾಮಗಾರಿ ವಿಳಂಬ ಕಾಣುತ್ತಿದೆಯಲ್ಲ ಎಂದು ರಾಜ್ಯ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಗಡ್ಕರಿ ಚಾಟಿ ಬೀಸಿದರು.

ಫ್ಲೈ ಓವರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಣ ಒದಗಿಸಿದರೂ ಕಾಮಗಾರಿ ಇನ್ನೂ ಅರ್ಧದಷ್ಟೂ ಪೂರ್ಣಗೊಂಡಿಲ್ಲ. ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತೋರಿದ ವಿಳಂಬ ನೀತಿಯೇ ಕಾರಣ ಎಂದು ಸಚಿವರಿಬ್ಬರೂ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಹೆಚ್ಚುವರಿ ಆರ್ಥಿಕ ನೆರವಿಗೆ ಗಡ್ಕರಿ ಸಮ್ಮತಿ: ಹುಬ್ಬಳ್ಳಿಯಲ್ಲಿ 3.61 ಕಿ.ಮೀ ಉದ್ದದ ಈ ಫ್ಲೈ ಓವರ್ ಕಾಮಗಾರಿಗೆ ಸಿವಿಲ್ ಕಾಸ್ಟ್ ಆಗಿ ₹196.99 ಕೋಟಿ ನಿಗದಿಪಡಿಸಿದ್ದು, ಇದಕ್ಕೆ ಹೆಚ್ಚುವರಿ ₹35.76 ಕೋಟಿ ಸೇರಿಸಿ ₹ 232.75 ಕೋಟಿ ನಿಗದಿಪಡಿಸಲಾಗಿತ್ತು. ಒಟ್ಟು ಯೋಜನಾ ವೆಚ್ಚ ₹298 ಕೋಟಿ ನಿಗದಿಪಡಿಸಲಾಗಿತ್ತು. ಸಚಿವ ಪ್ರಲ್ಹಾದ್ ಜೋಶಿ ಅವರ ಒತ್ತಾಸೆಯಂತೆ ಈಗ ₹51.49 ಕೋಟಿ ಹೆಚ್ಚುವರಿ ಅನುದಾನ ನೀಡಲು ಗಡ್ಕರಿ ಸಮ್ಮತಿಸಿದ್ದಾರೆ. ಅದರಂತೆ ಒಟ್ಟು ಯೋಜನಾ ವೆಚ್ಚ ಈಗ ₹349.49 ಕೋಟಿ ತಲುಪಿದೆ.

Related Articles

Leave a Reply

Your email address will not be published. Required fields are marked *

Back to top button