ಬಹಿರ್ದೆಸೆಗೆ ತೆರಳಿದ್ದ ವೇಳೆ ಬೀದಿ ನಾಯಿ ದಾಳಿ , ಮೃತಪಟ್ಟ ಲಿಂಗಸೂಗೂರು ಗ್ರಾಮದ ಬಾಲಕ.

ರಾಯಚೂರು: ಬಹಿರ್ದೆಸೆಗೆ ತೆರಳಿದ್ದ ವೇಳೆ ಬೀದಿ ನಾಯಿ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಕಸಬಾ ಲಿಂಗಸೂಗೂರು ಗ್ರಾಮದ ಬಾಲಕ ಚಿಕಿತ್ಸೆ ಫಲಕಾರಿಯಾಗಿದೆ ಇಂದು ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ರಾಯಚೂರು ಜಿಲ್ಲೆಯ ಕಸಬಾ ಲಿಂಗಸೂಗೂರು ಗ್ರಾಮದ ಸಿದ್ದಪ್ಪ ಬೀರಪ್ಪ(6) ಮೃತ ಬಾಲಕ. ಶನಿವಾರ ಸಂಜೆ ಸಮಯದಲ್ಲಿ ಬಾಲಕ ಸಿದ್ದಪ್ಪ ಬಹಿರ್ದೆಸೆಗೆಂದು ತೆರಳಿದ್ದ. ಈ ವೇಳೆ ಐದಾರು ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ್ದರಿಂದ ಬಾಲಕ ಗಂಭೀರ ಗಾಯಗೊಂಡಿದ್ದ.
ಸ್ಥಳೀಯರು ನಾಯಿಗಳನ್ನು ಓಡಿಸಿ ಬಾಲಕನನ್ನು ರಕ್ಷಿಸಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಆಸ್ಪತ್ರೆಯಲ್ಲಿ ಬಾಲಕ ಮೃತಪಟ್ಟಿದ್ದಾನೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಪುರಸಭೆ ಅಧಿಕಾರಿಗಳು ಬೀದಿ ನಾಯಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳದೇ ಇದ್ದದ್ದು ಬಾಲಕನ ಸಾವಿಗೆ ಕಾರಣ ಎಂದು ಪೋಷಕರು, ಸಂಬಂಧಿಕರು ಆರೋಪಿಸುತ್ತಿದ್ದಾರೆ.
ಘಟನೆಯ ಕುರಿತು ಲಿಂಗಸೂಗೂರು ಠಾಣೆಯ ಪೊಲೀಸರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, “ನಿನ್ನೆ ಸಂಜೆ ನಾಯಿಗಳು ದಾಳಿ ಮಾಡಿವೆ. ಅಲ್ಲಿಂದ ಬಾಗಲಕೋಟೆ ಆಸ್ಪತ್ರೆಗೆ ಚಿಕಿತ್ಸೆಗೆ ಬಾಲಕನ್ನು ಕುಟುಂಬಸ್ಥರು ಕರೆದುಕೊಂಡು ಹೋಗಿದ್ದರು. ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ಬಾಲಕ ಮೃತಪಟ್ಟಿದ್ದಾನೆ. ಘಟನೆ ಸಂಬಂಧಿಸಿದಂತೆ ದೂರು ನೀಡಿದರೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು” ಎಂದು ತಿಳಿಸಿದರು.