
ನಾಲ್ಕು ದಿನಗಳ ಹಿಂದೆ ಮೇ 7ರಂದು ಭಾರತ ನಡೆಸಿದ ಆಪರೇಷನ್ ಸಿಂದೂರ್ನಲ್ಲಿ 9 ಸ್ಥಳಗಳಲ್ಲಿ 100ಕ್ಕೂ ಹೆಚ್ಚು ಉಗ್ರರನ್ನು ಕೊಲ್ಲಲಾಗಿದೆ ಎಂದು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಹೇಳಿದ್ದಾರೆ. ಕದನ ವಿರಾಮಘೋಷಣೆಯಾಗಿ ಒಂದು ದಿನದ ಬಳಿಕ ಭಾರತದ ವಿವಿಧ ಪಡೆಗಳ ಮಹಾನಿರ್ದೇಶಕರು ಸುದ್ದಿಗೋಷ್ಠಿ ನಡೆಸಿ ಆಪರೇಷನ್ ಸಿಂದೂರ್ ಹಾಗು ನಂತರದ ಭಾರತದ ರಣತಂತ್ರಗಳ ಕೆಲ ವಿವರಗಳನ್ನು ಬಿಚ್ಚಿಟ್ಟಿದ್ದಾರೆ.
ವಾಯುಪಡೆ ಕಾರ್ಯಾಚರಣೆಗಳ ಡೈರೆಕ್ಟರ್ ಜನರಲ್ ಏರ್ ಮಾರ್ಷಲ್ ಎ.ಕೆ. ಭಾರ್ತಿ, ನೌಕಾಪಡೆ ಕಾರ್ಯಾಚರಣೆಗಳ ಡೈರೆಕ್ಟರ್ ಜನರಲ್ ವೈಸ್ ಅಡ್ಮಿರಲ್ ಪ್ರಮೋದ್ ಅವರೂ ಈ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು, ಕಾರ್ಯಾಚರಣೆಗಳ ಕೆಲ ವಿವರ ನೀಡಿದ್ದಾರೆ. ಆಪರೇಷನ್ ಸಿಂದೂರ್ನಲ್ಲಿ ಪಾಕಿಸ್ತಾನದ ಉಗ್ರ ನೆಲೆಗಳನ್ನು ನಾಶ ಮಾಡಿರುವುದಕ್ಕೆ ಸಾಕ್ಷ್ಯಗಳನ್ನೂ ಈ ಸಂದರ್ಭದಲ್ಲಿ ಪ್ರಸ್ತುತಪಡಿಸಿದ್ದಾರೆ.
ಆಪರೇಷನ್ ಸಿಂದೂರ್ನಲ್ಲಿ ಹಲವು ಉಗ್ರರನ್ನು ಕೊಲ್ಲಲಾಗಿದೆ. ಲಷ್ಕರೆ ತೈಯಬಾದ ಮುದಾಸಿರ್, ಜೈಷೆ ಸಂಘಟನೆಯ ಉಗ್ರ ಹಫೀಜ್ ಮೊಹಮ್ಮದ್, ಬಹಾವಲ್ಪುರದ ಮರ್ಕಜ್ ಸಭಾನಲ್ಲಾದ ಉಸ್ತುವಾರಿ ಜಮೀಲ್, ಲಷ್ಕರೆ ತೈಬಾ ಉಗ್ರ ಖಾಲಿದ್ ಮೊದಲಾದವರು ಕಾರ್ಯಾಚರಣೆಯಲ್ಲಿ ಹತ್ಯೆಯಾಗಿರುವ ಸಂಗತಿಯನ್ನು ಡಿಜಿಎಂಒ ನೀಡಿದ್ದಾರೆ.