ಸಾವಿರಕ್ಕೂ ಹೆಚ್ಚು ಮಹಿಳೆಯರಿಂದ ‘ಗೃಹಲಕ್ಷ್ಮೀ’ ತಿರಸ್ಕಾರ

ಕಾರವಾರ (ಉತ್ತರ ಕನ್ನಡ): ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿದೆ. ಪ್ರಸ್ತುತ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲೊಂದಾದ ಮನೆಯೊಡತಿಗೆ 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆಯಡಿ ಉತ್ತರಕನ್ನಡ ಜಿಲ್ಲೆಯಲ್ಲಿ ಫಲಾನುಭವಿಗಳಿಗೆ ಈವರೆಗೆ 1,095.03 ಕೋಟಿ ರೂ. ನೀಡಿದ್ದು, ಶೇ.99.91ರಷ್ಟು ಸಾಧನೆ ಮಾಡಿದೆ. ಆದರೆ, ಸಾವಿರಕ್ಕೂ ಹೆಚ್ಚು ಮಹಿಳೆಯರು ಈ ಯೋಜನೆಯು ತಮಗೆ ಬೇಡ ಎಂದು ತಿರಸ್ಕರಿಸಿದ್ದಾರೆ.
ಜಿಲ್ಲೆಯಲ್ಲಿ ಮಹಿಳೆಯನ್ನು ಕುಟುಂಬದ ಯಜಮಾನಿ ಎಂದು ನಮೂದಿಸಿರುವ 3,61,481 ಪಡಿತರ ಚೀಟಿಗಳಿದ್ದು, ಅವುಗಳಲ್ಲಿ ತೆರಿಗೆ ಪಾವತಿದಾರರು, ಮರಣ ಹೊಂದಿರುವವರು, ಯೋಜನೆ ನಿರಾಕರಿಸಿರುವವರು, ವಲಸೆ ಹೋಗಿರುವ ಕಾರಣದಿಂದ 25,676 ಮಂದಿ ಗೃಹಲಕ್ಷ್ಮೀ ಯೋಜನೆಗೆ ಅನರ್ಹರಾಗಿದ್ದಾರೆ. ಉಳಿದಂತೆ, ಅರ್ಹ 3,35,805 ಪಡಿತರ ಚೀಟಿಗಳಲ್ಲಿ 3,35,498 ಮಂದಿಯನ್ನು ಯೋಜನೆಗೆ ಯಶಸ್ವಿಯಾಗಿ ನೋಂದಾಯಿಸಿ ಶೇ.99.91 ಸಾಧನೆ ಮಾಡಲಾಗಿದೆ.
ಗೃಹಲಕ್ಷ್ಮೀ ಯೋಜನೆಗೆ ಅನರ್ಹರಾಗಿರುವವರಲ್ಲಿ 10,377 ಮಂದಿ ಆದಾಯ ತೆರಿಗೆ ಮತ್ತು ಜಿಎಸ್ಟಿ ಪಾವತಿದಾರರು, 4,875 ಮಂದಿ ಮರಣ ಹೊಂದಿರುವವರು, 7,503 ಮಂದಿ ವಲಸೆ ಹೋಗಿರುವವರು, 1,779 ನಿಷ್ಕ್ರಿಯಗೊಂಡ ಪಡಿತರ ಚೀಟಿಗಳು ಮತ್ತು ಯೋಜನೆಯನ್ನು ನಿರಾಕರಿಸಿರುವ 1,140 ಮಂದಿ ಇದ್ದಾರೆ.
ಯೋಜನೆಯಡಿ ಅಂಕೋಲಾ ತಾಲೂಕಿನಲ್ಲಿ 26,973 ಫಲಾನುಭವಿಗಳನ್ನು ನೋಂದಾಯಿಸಿದ್ದು, ಭಟ್ಕಳದಲ್ಲಿ 33,858, ದಾಂಡೇಲಿಯಲ್ಲಿ 13,931, ಹಳಿಯಾಳದಲ್ಲಿ 29,739, ಹೊನ್ನಾವರದಲ್ಲಿ 39,853, ಕಾರವಾರದಲ್ಲಿ 32,728, ಕುಮಟಾದಲ್ಲಿ 37,299, ಮುಂಡಗೋಡದಲ್ಲಿ 24,450, ಸಿದ್ದಾಪುರದಲ್ಲಿ 23,720, ಶಿರಸಿಯಲ್ಲಿ 41,326, ಸೂಪಾದಲ್ಲಿ 12,886, ಯಲ್ಲಾಪುರದಲ್ಲಿ 18,735 ಮಂದಿ ಮಹಿಳೆಯರನ್ನು ನೋಂದಾಯಿಸಲಾಗಿದೆ.