
ಮ್ಯಾಟ್ರಿಮೋನಿ ಆ್ಯಪ್ನಲ್ಲಿ ವರನನ್ನ ಹುಡುಕ ಹೊರಟ ಬೆಳಗಾವಿ ಯುವತಿಗೆ ವಂಚನೆ: ನೆದರಲ್ಯಾಂಡ್ ದಂತ ವೈದ್ಯನೆಂದು ನಂಬಿಸಿ 3.38 ಲಕ್ಷ ರೂ. ದೋಚಿದ ಖದೀಮ!
• ಬೆಳಗಾವಿ ಯುವತಿಗೆ ಮ್ಯಾಟ್ರಿಮೋನಿ ಆ್ಯಪ್ನಲ್ಲಿ ವಂಚನೆ
• ನಕಲಿ ದಂತ ವೈದ್ಯನಿಂದ ಲಕ್ಷಾಂತರ ಲೂಟಿ
• ದೆಹಲಿ ವಿಮಾನ ನಿಲ್ದಾಣದ ಹೆಸರಲ್ಲಿ ವಂಚನೆ
• ಸೈಬರ್ ಪೊಲೀಸರಿಂದ ಸಾರ್ವಜನಿಕರಿಗೆ ತೀವ್ರ ಎಚ್ಚರಿಕೆ
ಬೆಳಗಾವಿ: ಮ್ಯಾಟ್ರಿಮೋನಿ ಸೈಟ್ಗಳಲ್ಲಿ ಲಗ್ನವಾಗಲು ಗಂಡು ಹುಡುಕುವ ಮುನ್ನ ಎಚ್ಚರ! ವಿದೇಶದಲ್ಲಿ ದಂತ ಚಿಕಿತ್ಸಕನೆಂದು ನಂಬಿಸಿ ಬೆಳಗಾವಿಯ ಯುವತಿಯೊಬ್ಬರಿಗೆ ಬರೋಬ್ಬರಿ 3.38 ಲಕ್ಷ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಅಶ್ವಿನಿ (ಹೆಸರು ಬದಲಿಸಲಾಗಿದೆ) ಎಂಬ ಯುವತಿ ಮ್ಯಾಟ್ರಿಮೋನಿ ಆ್ಯಪ್ನಲ್ಲಿ ನೋಂದಾಯಿಸಿಕೊಂಡಿದ್ದಾಗ, ಹೈದರಾಬಾದ್ ಮೂಲದ ಸದ್ಯ ನೆದರಲ್ಯಾಂಡ್ನಲ್ಲಿ ದಂತ ವೈದ್ಯನಾಗಿರುವ ಆರ್ಯನ್ಕುಮಾರ ಎಂಬಾತ ಪರಿಚಯವಾಗಿದ್ದ. ಮದುವೆಯಾಗುವುದಾಗಿ ನಂಬಿಸಿ ನಯವಂಚಕ ಮಾತುಗಳನ್ನಾಡಿದ್ದ ಆತ, ಮೇ 25 ರಂದು ಭಾರತಕ್ಕೆ ಬರುವುದಾಗಿ ತಿಳಿಸಿದ್ದ.
ಮರುದಿನವೇ ತಾನು ದೆಹಲಿ ವಿಮಾನ ನಿಲ್ದಾಣಕ್ಕೆ ತಲುಪಿದ್ದು, ಅಲ್ಲಿ ಸಿಲುಕಿಕೊಂಡಿರುವುದಾಗಿ ನಾಟಕವಾಡಿದ್ದಾನೆ. ತದನಂತರ ವಿಮಾನ ನಿಲ್ದಾಣದ ಅಧಿಕಾರಿ ಸೋಗಿನಲ್ಲಿ ಮಾತನಾಡಿದ ಅಪರಿಚಿತ ಮಹಿಳೆಯೊಬ್ಬಳು, ಆರ್ಯನ್ ಬಳಿ ವಿದೇಶಿ ಕರೆನ್ಸಿ ಹೆಚ್ಚಿರುವುದರಿಂದ ಅದನ್ನು ಭಾರತೀಯ ಕರೆನ್ಸಿಗೆ ಬದಲಾಯಿಸಲು 85,800 ರೂ. ಕಸ್ಟಮ್ಸ್ ಶುಲ್ಕ ಪಾವತಿಸುವಂತೆ ಯುವತಿಯನ್ನು ನಂಬಿಸಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾಳೆ. ಇದಾದ ಬೆನ್ನಲ್ಲೇ ಮತ್ತೆ ಕರೆ ಮಾಡಿದ ಅದೇ ಮಹಿಳೆ, ಆರ್ಯನ್ ಬಳಿ ಚಿನ್ನ ಹಾಗೂ ವಜ್ರದ ಆಭರಣಗಳಿದ್ದು, ಅವುಗಳ ಕ್ಲಿಯರೆನ್ಸ್ಗಾಗಿ ಜಿಎಸ್ಟಿ ರೂಪದಲ್ಲಿ 2.53 ಲಕ್ಷ ರೂ.
ನೀಡಬೇಕೆಂದು ಬೇಡಿಕೆ ಇಟ್ಟಿದ್ದಾಳೆ. ಇದನ್ನು ಸತ್ಯವೆಂದು ನಂಬಿದ ಯುವತಿ, ವಂಚಕರು ಸೂಚಿಸಿದ ಬ್ಯಾಂಕ್ ಖಾತೆಗೆ ಒಟ್ಟು 3.38 ಲಕ್ಷ ರೂಪಾಯಿಗಳನ್ನು ಜಮೆ ಮಾಡಿದ್ದಾಳೆ. ಹಣ ವರ್ಗಾವಣೆಯಾದ ಬಳಿಕ ಆರೋಪಿಗಳ ಫೋನ್ ಸ್ವಿಚ್ಡ್ ಆಫ್ ಆಗಿದ್ದು, ತಾನು ಮೋಸ ಹೋಗಿರುವುದು ಯುವತಿಗೆ ತಡವಾಗಿ ಅರಿವಾಗಿದೆ. ಸದ್ಯ ಸಂತ್ರಸ್ತೆ ನಗರದ ಸೈಬರ್ ಅಪರಾಧ (ಸಿಇಎನ್) ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದೇ ವೇಳೆ ಸಾರ್ವಜನಿಕರು ಸಾಮಾಜಿಕ ಜಾಲತಾಣ ಹಾಗೂ ಮ್ಯಾಟ್ರಿಮೋನಿ ಆ್ಯಪ್ಗಳ ಅಪರಿಚಿತರ ಮಾತುಗಳನ್ನು ನಂಬಿ ಹಣ ಕಳೆದುಕೊಳ್ಳಬಾರದು ಎಂದು ಸೈಬರ್ ಪೊಲೀಸರು ಎಚ್ಚರಿಸಿದ್ದಾರೆ.


