ರಾಜಕೀಯರಾಜ್ಯ

ಕಿತ್ತೂರು ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭರಪೂರ ಚಾಲನೆ

ಬೆಳಗಾವಿ ಜಿಲ್ಲೆಯ ಕಿತ್ತೂರು ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭರಪೂರ ಚಾಲನೆ ಸಿಕ್ಕಿದೆ. ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಆರೋಗ್ಯ ಸೌಲಭ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಶಾಸಕ ಬಾಬಾಸಾಹೇಬ್ ಪಾಟೀಲ ಅವರು ಸುಮಾರು 55 ಲಕ್ಷ ರೂಪಾಯಿ ವೆಚ್ಚದ ಆಯುಷ್ಮಾನ್ ಆರೋಗ್ಯ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದಾರೆ.
ಕಿತ್ತೂರು ಕ್ಷೇತ್ರದಾದ್ಯಂತ ಆರೋಗ್ಯ ಸೌಲಭ್ಯಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕಿತ್ತೂರು ತಾಲೂಕಿನ ಹೋಳಿಹೊಸೂರು, ದಾಸ್ತಿಕೊಪ್ಪ, ಕಲಬಾವಿ, ಹುಲಿಕಟ್ಟಿ ಹಾಗೂ ಉಗರಖೋಡ ಸೇರಿದಂತೆ ಐದಾರು ಗ್ರಾಮಗಳಲ್ಲಿ ಸುಮಾರು 55 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಆಯುಷ್ಮಾನ್ ಆರೋಗ್ಯ ಕೇಂದ್ರಗಳ ಕಟ್ಟಡ ಕಾಮಗಾರಿಗೆ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ ಅವರು ಅಧಿಕೃತವಾಗಿ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು. ಶಿಕ್ಷಣ, ಆರೋಗ್ಯ ಮತ್ತು ರಸ್ತೆ ಸೇರಿದಂತೆ ವಿವಿಧ ಮೂಲಸೌಕರ್ಯಗಳಿಗೆ ನಿರಂತರವಾಗಿ ಅನುದಾನ ತಂದು ಕ್ಷೇತ್ರವನ್ನು ಮಾದರಿಯನ್ನಾಗಿ ರೂಪಿಸಲು ಶಾಸಕರು ಆದ್ಯತೆ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಶ್ಲಾಘಿಸಿದ್ದಾರೆ. ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬಾಬಾಸಾಹೇಬ್ ಪಾಟೀಲ, “ನನ್ನ ಕ್ಷೇತ್ರದಲ್ಲಿ ಯಾವುದೇ ಅನುದಾನದ ಕೊರತೆಯಿಲ್ಲ; ಯಾವ ಇಲಾಖೆಯಿಂದ ಹೇಗೆ ಅನುದಾನ ತರಬೇಕೆಂದು ನನಗೆ ಗೊತ್ತಿದೆ. ನನಗೆ ಸಚಿವನಾಗುವ ಆಸೆ ಇಲ್ಲ, ಕ್ಷೇತ್ರಕ್ಕೆ ಸೀಮಿತವಾಗಿ ಜನರ ಸೇವೆ ಮಾಡುವುದೇ ನನ್ನ ಗುರಿ” ಎಂದು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ಹೊಸ ಅಭಿವೃದ್ಧಿ ಯೋಜನೆಗಳ ಜಾರಿ ವೇಳೆ ರೈತರ ಜಮೀನು ಕಳೆದುಕೊಳ್ಳುವ ಆತಂಕದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ನಮ್ಮ ಸರ್ಕಾರ ಯಾವುದೇ ರೈತರಿಗೆ ಅನ್ಯಾಯ ಅಥವಾ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂಬ ಭರವಸೆ ನೀಡಿದರು.
ಇನ್ನು ಇತ್ತೀಚಿನ ಶಾಲಾ ವಿವಾದಗಳ ಕುರಿತು ಮಾತನಾಡುತ್ತಾ, ಯಾವುದೇ ಶಾಲೆಯಲ್ಲಿ ಮಕ್ಕಳ ಕೈಯಿಂದ ಸ್ವಚ್ಛತೆ ಸೇರಿದಂತೆ ಇನ್ನಿತರ ಕೆಲಸಗಳನ್ನು ಮಾಡಿಸಬಾರದು ಎಂಬುದು ಸರ್ಕಾರದ ಸ್ಪಷ್ಟ ನಿಯಮವಾಗಿದೆ. ಮಕ್ಕಳನ್ನು ದುಡಿಸಿಕೊಳ್ಳುವ ಬದಲು ಕ್ರಿಯಾತ್ಮಕ ಚಟುವಟಿಕೆಗಳನ್ನು ನಡೆಸಲಿ ಎಂದು ಕಿವಿಮಾತು ಹೇಳಿದರು. ಒಟ್ಟಿನಲ್ಲಿ ಕಿತ್ತೂರು ಕ್ಷೇತ್ರದಲ್ಲಿ ಆರೋಗ್ಯ ಮೂಲಸೌಕರ್ಯ ಸುಧಾರಣೆಗೆ ಇಟ್ಟಿರುವ ಈ ಹೆಜ್ಜೆ ಸ್ಥಳೀಯ ಜನರಲ್ಲಿ ಹರ್ಷ ಮೂಡಿಸಿದೆ.

Related Articles

Leave a Reply

Your email address will not be published. Required fields are marked *

Back to top button