Uncategorized

ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ಎನ್‌ಸಿಟಿಇ) ಮಾರ್ಗಸೂಚಿಗಳ ಪ್ರಕಾರ, ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಯನ್ನು ಅಭ್ಯರ್ಥಿಗಳ ಮಾತೃಭಾಷೆ ಅಥವಾ ಬೋಧನಾ ಮಾಧ್ಯಮದ ಭಾಷೆಯಲ್ಲಿ ಬರೆಯಲು ಅವಕಾಶ ಕಲ್ಪಿಸಬೇಕು

ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ಎನ್‌ಸಿಟಿಇ) ಮಾರ್ಗಸೂಚಿಗಳ ಪ್ರಕಾರ, ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಯನ್ನು ಅಭ್ಯರ್ಥಿಗಳ ಮಾತೃಭಾಷೆ ಅಥವಾ ಬೋಧನಾ ಮಾಧ್ಯಮದ ಭಾಷೆಯಲ್ಲಿ ಬರೆಯಲು ಅವಕಾಶ ಕಲ್ಪಿಸಬೇಕು. ಆದರೆ, ಮಹಾರಾಷ್ಟ್ರ ಸರ್ಕಾರ ಕನ್ನಡ ಮಾಧ್ಯಮ ಶಿಕ್ಷಕರಿಗೂ ಕಡ್ಡಾಯವಾಗಿ ಮರಾಠಿ ಭಾಷೆಯಲ್ಲಿಯೇ ಟಿಇಟಿ ಪರೀಕ್ಷೆ ಬರೆಯುವಂತೆ ನಿಯಮ ಜಾರಿಗೊಳಿಸಿರುವುದು ಕನ್ನಡ ಭಾಷಿಕ ಶಿಕ್ಷಕರ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದ್ದು, ಶಿಕ್ಷಣದಲ್ಲಿ ಸಮಾನ ಅವಕಾಶದ ತತ್ವಕ್ಕೂ ಧಕ್ಕೆಯಾಗಿದೆ.

ಆದ್ದರಿಂದ, ಈ ಗಂಭೀರ ವಿಷಯದಲ್ಲಿ ವೈಯಕ್ತಿಕ ಆಸಕ್ತಿ ವಹಿಸಿ, ಮಹಾರಾಷ್ಟ್ರ ಸರ್ಕಾರ ಹಾಗೂ ಭಾರತ ಸರ್ಕಾರದ ಸಂಬಂಧಿತ ಇಲಾಖೆಗಳೊಂದಿಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಸಿ, ಮಹಾರಾಷ್ಟ್ರ ರಾಜ್ಯದ ಕನ್ನಡ ಮಾಧ್ಯಮ ಶಿಕ್ಷಕರಿಗೆ ಕನ್ನಡ ಭಾಷೆಯಲ್ಲಿಯೇ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಬರೆಯಲು ಅವಕಾಶ ಕಲ್ಪಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಇದೇ ವೇಳೆ, ಕನ್ನಡ ನೆಲದಲ್ಲಿ ವಾಸಿಸುತ್ತಾ ಕನ್ನಡ ಭಾಷೆ ಕಡ್ಡಾಯಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಎಂಇಎಸ್ ಸಂಘಟನೆಯ ನಾಯಕರ ವಿರುದ್ಧ ಕಾನೂನುಬದ್ಧವಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಎಂಇಎಸ್ ಸಂಘಟನೆಯ ಕುರಿತು ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂಬ ಹಲವು ಕನ್ನಡಪರ ಸಂಘಟನೆಗಳ ಬೇಡಿಕೆಯನ್ನು ಸಚಿವ ಸಂಪುಟದ ಸಭೆಯಲ್ಲಿ ಸರ್ಕಾರದ ಗಮನಕ್ಕೆ ತಂದು, ಕನ್ನಡಿಗರ ಹಲವು ದಶಕಗಳ ಬೇಡಿಕೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕೆಂದು ಮನವಿ ಮಾಡಲಾಯಿತು.

ಹಾಗೆಯೇ, ಸುವರ್ಣ ವಿಧಾನಸೌಧದ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ವರ್ಷದಲ್ಲಿ ಕೆವಲ ೧೦ ದಿನಗಳು ನಡೆಯುವ ವಿಧಾನಮಂಡಲ ಅಧಿವೇಶನಕ್ಕೆ ಮಾತ್ರ ಸೀಮಿತವಾಗದೆ, ವಿವಿಧ ಇಲಾಖೆಗಳ ರಾಜ್ಯ ಮಟ್ಟದ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಿ, ಸಾರ್ವಜನಿಕರಿಗೆ ಅಗತ್ಯ ಸರ್ಕಾರಿ ಸೇವೆಗಳು ಒಂದೇ ಕೇಂದ್ರದಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಹಾಗೂ ಸುವರ್ಣ ವಿಧಾನಸೌದವನ್ನು ಶಕ್ತಿ ಕೇಂದ್ರವಾಗಿ ಪರಿವರ್ತನೆ ಮಾಡಲು ಒತ್ತಾಯಿಸಲಾಯಿತು.

ಇದಲ್ಲದೆ, ಬೆಳಗಾವಿಯನ್ನು ಉತ್ತರ ಕರ್ನಾಟಕದ ಪ್ರಮುಖ ತಂತ್ರಜ್ಞಾನ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಐಟಿ–ಬಿಟಿ ಕಂಪನಿಗಳು, ಸ್ಟಾರ್ಟ್‌ಅಪ್‌ಗಳು ಹಾಗೂ ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳಿಗೆ ವಿಶೇಷ ನೀತಿ ರೂಪಿಸಬೇಕು. ಬೆಳಗಾವಿಯಲ್ಲಿ ಐಟಿ-ಬಿಟಿ ಪಾರ್ಕ್‌ಗಳು, ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕೇಂದ್ರಗಳು, ಸ್ಟಾರ್ಟ್‌ಅಪ್ ಇಂಕ್ಯುಬೇಷನ್ ಕೇಂದ್ರಗಳು ಹಾಗೂ ಜಾಗತಿಕ ಕಂಪನಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷರಾದ ದೀಪಕ ಗುಡಗನಟ್ಟಿ, ರಾಜ್ಯ ಸಂಚಾಲಕರಾದ ಸುರೇಶ ಗವನ್ನವರ, ಉಪಾಧ್ಯಕ್ಷರಾದ ಗಣೇಶ ರೋಕಡೆ, ರಾಜು ನಾಶಿಪುಡಿ, ದಶರಥ ಬನೋಶಿ , ಹೊಳೆಪ್ಪ ಸುಳದಾಳ, ಬಸವರಾಜ ಧೂಳಪ್ಪಗೋಳ, , ಅಡಿವೆಪ್ಪ ತಲ್ಲೂರಿ, ಬಸವರಾಜ ದೂಳಪ್ಪಗೋಳ್, ಉದಯ ಚಿಕ್ಕಣ್ಣವರ, ರಮೇಶ ಯರಗಣ್ಣವರ, ಸತೀಶ ಗುಡದವರ, ಮಂಜುನಾಥ ರಾಠೋಡ್, ಲೋಕೇಶ್ ರಾಠೋಡ್, ಅರ್ಜುನ ಕಾಂಬಳೆ, ಬಸವರಾಜ ದನದವರ, ಜಯವಂತ ಹಿಂಡಲೇಕರ, ಭರತೇಶ ಜೋಳದ, ವಿರೇಶ ಹುನಸಿಮರದ, ನಾಗರಾಜ ಲಕ್ಕಪ್ಪಗೋಳ್, ಸಂಪತ್ ಸಕ್ರೆನ್ನವರ, ಗಿರೀಶ ಪಾಟೀಲ, ಶಾಂತಾ ಹಣಬರ, ಮಧು ಇಟಗಿ, ರೂಪಾಲಿ ಬಾರಿಗಡ್ಡಿ, ದೀಪಾಲಿ ಬನಸೋಡೆ, ತೃಪ್ತಿ ಹಿರೇಮಠ ಉಪಸ್ಥಿತರಿದ್ದರು..

Related Articles

Leave a Reply

Your email address will not be published. Required fields are marked *

Back to top button