ಅಂತರ್ ಜಿಲ್ಲಾ ಖದೀಮರ ಗ್ಯಾಂಗ್ ಒಂದನ್ನು ಬೆಳಗಾವಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಬೆಳಗಾವಿ: ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಖದೀಮರ ಗ್ಯಾಂಗ್ ಒಂದನ್ನು ಬೆಳಗಾವಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ವಿವಿಧ ದೇವಸ್ಥಾನಗಳಲ್ಲಿ ಕನ್ನ ಹಾಕಿದ್ದ ಕಳ್ಳರನ್ನು ಹಿಡಿಯುವಲ್ಲಿ ಬೆಳಾವಿ ಜಿಲ್ಲೆಯ ಜಿಲ್ಲೆಯ ಹಾರೂಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ತೋಟದ ಜಮೀನಿನಲ್ಲಿದ್ದ ಶ್ರೀ ರಾಣಮ್ಮಾ ದೇವಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದಿದ್ದ ಬಂಗಾರದ ಮಂಗಳಸೂತ್ರ ಮತ್ತು ಬೆಳ್ಳಿಯ ಒಡವೆಗಳ ಕಳ್ಳತನ ಪ್ರಕರಣವನ್ನು ಹಾರೂಗೇರಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.
ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ಅವರ ಮಾರ್ಗದರ್ಶನದಲ್ಲಿ ರಚನೆಯಾಗಿದ್ದ ವಿಶೇಷ ತನಿಖಾ ತಂಡವು, ಅಡಳಹಟ್ಟಿ ಗ್ರಾಮದ ನಿವಾಸಿಗಳಾದ ವಿಜಯ ಭೀಮಪ್ಪ ಗುಡದಿನ್ನಿ, ಕಲೇಶ್ ಅಲ್ಲಪ್ಪ ಮೂರಾಬಟ್ಟಿ, ಶಿವಾನಂದ ವಿಠಲ ಚಿಕ್ಕಟ್ಟಿ ಮತ್ತು ಸಂಗಮೇಶ ಶಂಕರ ಐನಾಪೂರ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿಗಳು ಕೇವಲ ಹಾರೂಗೇರಿ ಮಾತ್ರವಲ್ಲದೆ ಅಥಣಿ, ಕಾಗವಾಡ ಹಾಗೂ ಬಾಗಲಕೋಟೆ ಜಿಲ್ಲೆಯ ಲೋಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸ್ಥಾನಗಳಲ್ಲೂ ಕಳ್ಳತನ ಎಸಗಿರುವುದನ್ನು ಒಪ್ಪಿಕೊಂಡಿದ್ದಾರೆ.
ಬಂಧಿತ ಆರೋಪಿಗಳಿಂದ ಪೊಲೀಸರು 1.30 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು, 18.23 ಲಕ್ಷ ರೂಪಾಯಿ ಮೌಲ್ಯದ 7 ಕೆಜಿ 760 ಗ್ರಾಂ ಬೆಳ್ಳಿ ಆಭರಣಗಳು, 29 ಕೆಜಿಗೂ ಹೆಚ್ಚು ಕಂಚಿನ ಸಾಮಗ್ರಿಗಳು ಹಾಗೂ ಕಳ್ಳತನಕ್ಕೆ ಬಳಸುತ್ತಿದ್ದ 6 ಲಕ್ಷ ರೂಪಾಯಿ ಮೌಲ್ಯದ ಮಹೀಂದ್ರಾ ಪಿಕ್ ಅಪ್ ವಾಹನ ಸೇರಿದಂತೆ ಒಟ್ಟು ₹25,89,295/- ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.



