Uncategorized

ಬೆಂಗಳೂರಿನಲ್ಲಿ ಕಾನೂನು ವಿದ್ಯಾರ್ಥಿನಿ ಹತ್ಯೆ

ಬೆಂಗಳೂರು: ಪ್ರೀತಿಸಲು ನಿರಾಕರಿಸಿದ್ದ ಇಬ್ಬರು ಯುವತಿಯರು ಭಗ್ನ ಪ್ರೇಮಿಗಳಿಂದ ಹತ್ಯೆಗೀಡಾಗಿದ್ದಾರೆ. ಪ್ರೀತಿಸಲು ನಿರಾಕರಿಸಿದ್ದ ಕಾನೂನು ಪದವಿ ವಿದ್ಯಾರ್ಥಿನಿ ಅಮೃತಾಳನ್ನು ((24) ಬೆಂಗಳೂರಿನ ಜೀವನ್ ಭೀಮಾನಗರದ ಕೋಡಿಹಳ್ಳಿಯಲ್ಲಿ ನಡುರಸ್ತೆಯಲ್ಲೇ ಅಡ್ಡಗಟ್ಟಿದ ಸಹೋದರರಿಬ್ಬರು, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ವಿಲ್ಸನ್​ಗಾರ್ಡ್​ನ ನಿವಾಸಿ ಧನುಷ್(24) ಹಾಗೂ ಆತನ ಸಹೋದರ ಸೂರ್ಯ (21)ನನ್ನು ಪೊಲೀಸರು ಬಂಧಿಸಿದ್ದಾರೆ. ಜು.13ರಂದು ನಡೆದ ಘಟನೆಯಲ್ಲಿ ತೀವ್ರ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜು.15ರ ಸಂಜೆ ಮೃತಪಟ್ಟಿದ್ದಾಳೆ.

ಆರೋಪಿಗಳ ಪೈಕಿ ಧನುಷ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಈತನಿಗೆ ಈಗಾಗಲೇ ಮದುವೆಯಾಗಿ, ಒಂದು ಮಗು ಕೂಡ ಇದೆ. ಆದರೆ, ಕೌಟುಂಬಿಕ ಕಾರಣಕ್ಕೆ ಕೆಲ ವರ್ಷಗಳಿಂದ ದಂಪತಿಗೆ ವಿಚ್ಛೇದನವಾಗಿತ್ತು. ಇನ್ನು ಸೂರ್ಯ, ಫಾರ್ಮಸಿ ಕಂಪನಿಯಲ್ಲಿ ಸೇಲ್ಸ್​ಮನ್ ಆಗಿದ್ದ. ಕೊಲೆಯಾದ ಅಮೃತಾ, ನಾಲ್ಕನೇ ವರ್ಷದ ಎಲ್​ಎಲ್​ಬಿ ವ್ಯಾಸಂಗ ಮಾಡುತ್ತಿದ್ದಳು. ಜತೆಗೆ ಮನೆ ಸಮೀಪದಲ್ಲಿ ಪಿಜ್ಜಾ ಶಾಪ್​ನಲ್ಲಿ ಪಾರ್ಟ್ ಟೈಂ ಕೆಲಸ ಮಾಡಿಕೊಂಡಿದ್ದಳು.

ಎರಡು ವರ್ಷಗಳ ಹಿಂದೆ ಓಂ ಶಕ್ತಿ ಮಾಲೆ ಹಾಕಿದ್ದ ವೇಳೆ ಆರೋಪಿಗಳು ಹಾಗೂ ಯುವತಿ ಕುಟುಂಬ ಸದಸ್ಯರ ಪರಿಚಯವಾಗಿದೆ. ಇದೇ ವೇಳೆ ಧನುಷ್ ಮತ್ತು ಅಮೃತಾ ಪರಿಚಯವಾಗಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಧನುಷ್​ಗೆ ಮದುವೆಯಾಗಿ, ಮಗು ಇರುವುದು ಮತ್ತು ಬೇರೊಂದು ಯುವತಿ ಜತೆ ಸಂಬಂಧ ಹೊಂದಿದ್ದ ವಿಚಾರ ತಿಳಿದ ಅಮೃತಾ, ಆತನಿಂದ ಅಂತರ ಕಾಯ್ದುಕೊಂಡಿದ್ದಳು. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ಆಗಿತ್ತು. ಬಳಿಕ ಎರಡೂ ಕುಟುಂಬ ಸದಸ್ಯರು ಸಂಧಾನ ಮಾಡಿಕೊಂಡಿದ್ದರು.

ಮನೆಯ ಸಮೀಪದಲ್ಲೇ ಇರುವ ಪಿಜ್ಜಾ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದ ಅಮೃತಾ, ಜುಲೈ 13ರ ಸಂಜೆ 4 ಗಂಟೆ ಸುಮಾರಿಗೆ ಮನೆಯಿಂದ ಕೋಡಿಹಳ್ಳಿಯ ಎಚ್​ಎಎಲ್ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಮಾರಕಾಸ್ತ್ರಗಳಿಂದ ಸಾರ್ವಜನಿಕವಾಗಿಯೇ ಸೂರ್ಯ ದಾಳಿ ನಡೆಸಿ, ಅಮೃತಾಳ ಎದೆ, ಬೆನ್ನಿಗೆ ಐದಾರು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಈ ವೇಳೆ ಅಣ್ಣ ಧನುಷ್ ಕೂಡ ಇದ್ದ. ಪ್ರಾಥಮಿಕ ವಿಚಾರಣೆಯಲ್ಲಿ ಧನುಷ್ ಸೂಚನೆ ಮೇರೆಗೆ ಕೃತ್ಯ ನಡೆದಿದೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button