Uncategorized
ಕರ್ನಾಟಕ ಪರ ಠರಾವು ವಿಷಯದಲ್ಲಿ ಸರ್ಕಾರದ ಆದೇಶ ಬುಡಮೇಲು ಮಾಡಿದರೇ ಉಗ್ರ ಪ್ರತಿಭಟನೆ ಉಗ್ರ ಹೋರಾಟಕ್ಕೆ ರಣಕಹಳೆ ಮೊಳಗಿಸಿದ ಕನ್ನಡ ಸಂಘಟನೆಗಳು

ಕರ್ನಾಟಕ ಪರ ಠರಾವು ವಿಷಯದಲ್ಲಿ ಸರ್ಕಾರದ ಆದೇಶ ಬುಡಮೇಲು ಮಾಡಿದರೇ ಉಗ್ರ ಪ್ರತಿಭಟನೆ
ಉಗ್ರ ಹೋರಾಟಕ್ಕೆ ರಣಕಹಳೆ ಮೊಳಗಿಸಿದ ಕನ್ನಡ ಸಂಘಟನೆಗಳು
• ಬೆಳಗಾವಿ ಪಾಲಿಕೆಯಲ್ಲಿ ಕನ್ನಡ ಗೊತ್ತುವಳಿ ಹೋರಾಟ
• ಸರ್ಕಾರಿ ಆದೇಶ ಜಾರಿಗೆ ಸಂಘಟನೆಗಳ ಎಚ್ಚರಿಕೆ
• ಡಿಸಿ ಹಾಗೂ ಆಯುಕ್ತರ ಭೇಟಿಗೆ ಸಭೆಯಲ್ಲಿ ತೀರ್ಮಾನ
• ಅಶೋಕ ಚಂದರಗಿ ನೇತೃತ್ವದಲ್ಲಿ ಮಹತ್ವದ ಸಭೆ
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಪರ ಗೊತ್ತುವಳಿ ಅಂಗೀಕರಿಸುವಂತೆ ಸರ್ಕಾರ ಆದೇಶ ನೀಡಿದ್ದರೂ, ಅದನ್ನು ವಿಳಂಬಗೊಳಿಸುವ ಹುನ್ನಾರ ನಡೆದಿರುವುದನ್ನು ಖಂಡಿಸಿ ಕನ್ನಡ ಸಂಘಟನೆಗಳು ಉಗ್ರ ಹೋರಾಟಕ್ಕೆ ರಣಕಹಳೆ ಮೊಳಗಿಸಿವೆ. ಶನಿವಾರದಿಂದಲೇ ಜಿಲ್ಲಾಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳನ್ನು ಭೇಟಿಯಾಗಿ ಒತ್ತಡ ಹೇರಲು ತೀರ್ಮಾನಿಸಿವೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿಯನ್ನು ಅಂಗೀಕರಿಸಲು ರಾಜ್ಯ ಸರ್ಕಾರ ನೀಡಿರುವ ಆದೇಶವನ್ನು ಬುಡಮೇಲು ಮಾಡಲು ತೆರೆಮರೆಯ ಯತ್ನಗಳು ನಡೆಯುತ್ತಿದ್ದು, ಇದಕ್ಕೆ ಅವಕಾಶ ನೀಡದಂತೆ ಸರ್ಕಿಟ್ ಹೌಸ್ನಲ್ಲಿ ನಡೆದ ಕನ್ನಡ ಸಂಘಟನೆಗಳ ಸಭೆಯಲ್ಲಿ ತೀವ್ರ ಎಚ್ಚರಿಕೆ ನೀಡಲಾಗಿದೆ. ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅಧ್ಯಕ್ಷತೆ ವಹಿಸಿದ್ದ ಈ ಸಭೆಯಲ್ಲಿ, ಯಾವುದೇ ತಾಂತ್ರಿಕ ನೆಪವೊಡ್ಡಿ ಗೊತ್ತುವಳಿ ಮಂಡನೆಯನ್ನು ಮುಂದೂಡದೆ, ಶಾಸಕ ಅಭಯ ಪಾಟೀಲ ಅವರು ನೀಡಿದ ಭರವಸೆಯಂತೆ ಮಹಾಪೌರರು ಮತ್ತು ಉಪಮಹಾಪೌರರು ಕೂಡಲೇ ಸಭೆ ಕರೆದು ಆದೇಶ ಜಾರಿಗೊಳಿಸಬೇಕೆಂದು ಆಗ್ರಹಿಸಲಾಯಿತು.
ಸರ್ಕಾರದ ಆದೇಶದ ಅನುಷ್ಠಾನಕ್ಕೆ ಒತ್ತಾಯಿಸಿ ಶನಿವಾರದಿಂದಲೇ ಮಹಾನಗರ ಪಾಲಿಕೆಗೆ ತೆರಳಿ ಮೇಯರ್ಗಳನ್ನು ಭೇಟಿ ಮಾಡಲು ನಿರ್ಧರಿಸಲಾಗಿದ್ದು, ವೀರಶೈವ ಸಮಾಜದ ಮುಖಂಡ ಆರ್.ಪಿ. ಪಾಟೀಲ ಸೇರಿದಂತೆ ವಿವಿಧ ಸಮಾಜಗಳ ಪ್ರಮುಖರು ಕೈಜೋಡಿಸಿದ್ದಾರೆ. ಅಲ್ಲದೆ, ಶ್ರೀ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿಯವರನ್ನು ಭೇಟಿಯಾಗಿ ಚರ್ಚಿಸಲು ಹಾಗೂ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮತ್ತು ಆಯುಕ್ತ ಕಾರ್ತಿಕ್ ಎಂ. ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.
ಈ ಸಭೆಯಲ್ಲಿ ಮಹಾದೇವ ತಳವಾರ, ಬಲರಾಮ ಮಾಸೇನಟ್ಟಿ, ರಾಜು ಕೊಲಾ, ಸಯ್ಯದ ಮನ್ಸೂರ್, ಸಾಗರ ಬೋರಗಲ್ಲ, ವಂದನಾ ಹೊರಕೇರಿ, ಅನು ಎಸ್.ಆರ್., ಶಿವಾಜಿರಾವ್ ಗೋರವರ, ಸಾಗರ ಪೂಜೇರಿ, ಸಂತೋಷ ತಳಮನಿ, ರಾಹುಲ ಭೋಸಲೆ, ಲಕ್ಷ್ಮೀಕಾಂತ ಮಾನೆ, ಅಶೋಕ ಕೊನಕೇರಿ, ಶುಭಂ ಮಾನೆ ಹಾಗೂ ಮಂಜುನಾಥ ಪಾಸ್ತೆ ಮುಂತಾದ ಪ್ರಮುಖರು ಭಾಗವಹಿಸಿದ್ದರು.



