ಬೆಂಗಳೂರು

ಮಹಿಳೆ ಸ್ವಾಭಿಮಾನದ ಪ್ರತೀಕ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್.

ಬೆಂಗಳೂರು: ಮಹಿಳೆ ಸ್ವಾಭಿಮಾನದ ಪ್ರತೀಕ. ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲೂ ದಾಪುಗಾಲಿಡುತ್ತಿದ್ದು, ತನ್ನ‌ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಹೋರಾಟ ನಡೆಸಬೇಕಾಗುವುದು ಅನಿವಾರ್ಯ ಎಂದು ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಮಹಿಳೆಯರು ಕುಟುಂಬ ಸಮಾಜ ಅಥವಾ ಯಾವುದೇ ಕ್ಷೇತ್ರದಲ್ಲೂ, ಸಮರ್ಥವಾಗಿ ನಿಭಾಯಿಸದೆ ಹಿಂದೆ ಸರಿದ ಉದಾಹರಣೆಗಳಿಲ್ಲ. ಮಹಿಳೆಗೆ ತನ್ನದೇ ಆದ ಜವಾಬ್ದಾರಿ ಇದ್ದು, ಅದನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಬರುತ್ತಿದ್ದಾಳೆ ಎಂದರು.

ಹೆಣ್ಣುಮಕ್ಕಳಿಗೆ ಜವಾಬ್ದಾರಿ ಜಾಸ್ತಿ. ಪುರುಷರಿಗಿಂತ ಮಹಿಳೆಯರಿಗೆ ಜವಾಬ್ದಾರಿ ಹೆಚ್ಚು. ಮನೆಯ ಒಳಗೆ ಮತ್ತು ಹೊರಗೂ ತನ್ನದೇ ಆದ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಬರುವ‌ ಮಹಿಳೆಯರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಸಚಿವರು ಹೇಳಿದರು.

ಪ್ರತಿಯೊಂದು ಕ್ಷೇತ್ರದಲ್ಲೂ ಹೆಣ್ಣು ಇಂದು ತನ್ನ ಛಾಪನ್ನು ಮೂಡಿಸುತ್ತಿದ್ದಾಳೆ. ಪ್ರತಿ ಹೆಣ್ಣು ಮಗಳ ಜೀವನದ ಹಿಂದೆ ತನ್ನದೇ ಆದ ಕಥೆಗಳಿವೆ. ತಳಮಟ್ಟದಿಂದ ಮೇಲೆ ಬಂದು ಸಮಾಜದ ಎಲ್ಲಾ ಸ್ತರಗಳಲ್ಲಿ ಮಹಿಳೆಯರು ಬೆಳೆದಿದ್ದಾರೆ. ಗುರಿ ಇಲ್ಲದ ಜೀವನ ಮಹಿಳೆಗೆ ಸಾಧುವಲ್ಲ. ಗುರಿ ಮುಂದಿಟ್ಟುಕೊಂಡೆ ಮುಂದೆ ಸಾಗಬೇಕು ಎಂದು ಸಚಿವರು ಕರೆ ನೀಡಿದರು.

ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮಹಿಳೆಯರ ಪ್ರತೀಕವಾಗಿ ನಮ್ಮ ಮುಂದಿದ್ದಾರೆ. ಒಂದೆಡೆ ಅಗರ್ಭ ಶ್ರೀಮಂತ ಮನೆತನದಲ್ಲಿ ಜನಿಸಿದರೂ ಜೀವನದುದ್ದಕ್ಕೂ ಸಮಾಜಕ್ಕಾಗಿ ಕಳೆದರು. ಅವರು ಮಹಿಳೆಯರಿಗೆ ಸ್ಫೂರ್ತಿದಾಯಕರಾಗಿದ್ದಾರೆ. ಹಾಗೆಯೇ ಕಿತ್ತೂರು ರಾಣಿ ಚನ್ನಮ್ಮ ನಮ್ಮ ಸ್ವಾಭಿಮಾನದ ಪ್ರತೀಕವಾಗಿದ್ದಾರೆ ಎಂದು ಸಚಿವೆ‌ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಲವಾರು ಯೋಜನೆಗಳನ್ನು ತಂದಿದೆ. ರಾಜ್ಯದ 37 ಲಕ್ಷ ಮಕ್ಕಳ ಲಾಲನೆ ಪಾಲನೆ ಮಾಡುತ್ತಿದ್ದು, 15 ಲಕ್ಷ ಬಾಣಂತಿಯರ ಆರೈಕೆ ಮಾಡುತ್ತಿದೆ, ದುರ್ಬಲ ಮಹಿಳೆಯರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಗೌರವ ಧನವನ್ನು ಬಜೆಟ್‌ನಲ್ಲಿ ಹೆಚ್ಚಳ ಮಾಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿಸುವ ಇರಾದೆ ಹೊಂದಲಾಗಿದೆ ಎಂದರು.

ಈ ವೇಳೆ ಶಾಸಕ ಉದಯ್ ಗರುಡಾಚಾರ್, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಾವತಿ, ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ, ಮಾಜಿ‌ ಶಾಸಕಿ ಸೌಮ್ಯಾ ರೆಡ್ಡಿ, ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷರಾದ ನಾಗಣ್ಣಗೌಡ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಮ್ಲಾ ಇಕ್ಬಾಲ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್.ನಿಶ್ಚಲ್, ಇಲಾಖೆಯ ನಿರ್ದೇಶಕರಾದ ರಾಘವೇಂದ್ರ, ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಪುಷ್ಪಲತಾ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

Related Articles

Leave a Reply

Your email address will not be published. Required fields are marked *

Back to top button