Uncategorized

ಎಲ್ಲಾ ಸಂಸ್ಥೆಗಳಲ್ಲೂ ಕನ್ನಡ ಬಾವುಟ ಹಾರಾಟ ಕಡ್ಡಾಯ: ಡಿ.ಕೆ. ಶಿವಕುಮಾರ್

ಬೆಂಗಳೂರು : “ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಎಲ್ಲಾ ಸಂಘ ಸಂಸ್ಥೆ (ಸರ್ಕಾರಿ ಹಾಗೂ ಖಾಸಗಿ) ಗಳಲ್ಲಿ ಕನ್ನಡ ಧ್ವಜಾರೋಹಣ ಮಾಡುವುದನ್ನು ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದ ಆವರಣದಲ್ಲಿ ನೂತನವಾಗಿ ಪ್ರತಿಷ್ಟಾಪಿಸಿರುವ ಭುವನೇಶ್ವರಿಯ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಅವರು ಸೋಮವಾರ ಮಾತನಾಡಿದರು.

“ನಮ್ಮ ಮಾತೃಭಾಷೆ, ಈ ನೆಲ, ಜಲ ಕಾಪಾಡಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಬೆಂಗಳೂರಿನಲ್ಲಿ 107 ಭಾಷೆ ಮಾತನಾಡುವ ಜನರಿದ್ದಾರೆ. ಕಳೆದ ವರ್ಷ ಎಲ್ಲಾ ಸಂಘ ಸಂಸ್ಥೆಗಳಲ್ಲೂ ನವೆಂಬರ್ 1 ರಂದು ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕನ್ನಡದ ಧ್ವಜ ಹಾರಿಸುವಂತೆ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದೆ. ನಾನು ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ, ಆದರೆ ಮುಂದಿನ ದಿನಗಳಲ್ಲಿ ಇದನ್ನು ಕಡ್ಡಾಯ ಮಾಡುವ ಆದೇಶವನ್ನು ಹೊರಡಿಸಲಾಗುವುದು. ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಅಥವಾ ಪಾಲಿಕೆ ವತಿಯಿಂದ ಎಲ್ಲಾ ಸಂಸ್ಥೆಗಳಿಗೂ ಕನ್ನಡ ಬಾವುಟ ಪೂರೈಸುವ ಕೆಲಸ ಮಾಡುತ್ತೇವೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಕನ್ನಡರಾಜ್ಯೋತ್ಸವದ ದಿನದಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವಂತೆ ಸೂಚಿಸಲಾಗುವುದು. ಆಮೂಲಕ ಸಣ್ಣ ವಯಸ್ಸಿನಿಂದಲೇ ಮಕ್ಕಳಲ್ಲಿ ಕನ್ನಡದ ವೈಭವವನ್ನು ಬಿತ್ತುವ ಕೆಲಸ ಮಾಡಲಾಗುವುದು” ಎಂದು ತಿಳಿಸಿದರು.

ಮಕ್ಕಳಿಗೆ ಶಾಲೆಗಳಲ್ಲಿ ಕನ್ನಡವನ್ನು ದ್ವಿತೀಯ ಭಾಷೆಯಾಗಿಯಾದರೂ ವ್ಯಾಸಂಗ ಮಾಡಬೇಕು. ಇಲ್ಲದಿದ್ದರೆ ಮಕ್ಕಳು ಕನ್ನಡ ಕಲಿಯಲು ಕಷ್ಟಪಡುತ್ತಾರೆ. ಈ ನಿಟ್ಟಿನಲ್ಲಿ ನಾವು ಒಟ್ಟಾಗಿ ಕನ್ನಡವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ನಾವು ಯಾವುದಕ್ಕೂ ಜಗ್ಗದೆ ನೆಲ, ಜಲ, ಭಾಷೆ ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ. ಈ ಕಾರ್ಯವನ್ನು ಕೇವಲ ಸರ್ಕಾರ ಮಾತ್ರ ಮಾಡುತ್ತಿದೆ ಎಂದು ಹೇಳುವುದಿಲ್ಲ. ಕನ್ನಡ ಸಂಘ ಸಂಸ್ಥೆಗಳು ಈ ಭಾಷೆ ಉಳಿಯಲು ಹೋರಾಟ ಮಾಡುತ್ತಿದ್ದೀರಿ. ನಾವು ಅಧಿಕಾರದ ಆಸೆಗೆ ಹೋರಾಟ ಮಾಡಿದರೆ, ನೀವುಗಳು ಯಾವುದನ್ನು ನಿರೀಕ್ಷೆ ಮಾಡದೇ ಭಾಷೆ ಉಳಿವಿಗೆ ಶ್ರಮಿಸುತ್ತಿದ್ದೀರಿ.

ನಮ್ಮಲ್ಲಿ ಮಾತ್ರ ನಾಡಧ್ವಜ, ನಾಡಗೀತೆ:

“ಇಡೀ ಭೂಮಿಯನ್ನು ಕಾಪಾಡುವ ತಾಯಿ ಭುವನೇಶ್ವರಿ, ಕನ್ನಡದ ಕುಲದೇವತೆ ಭುವನೇಶ್ವರಿ. ದೇಶದ ವಿವಿಧ ರಾಜ್ಯಗಳಲ್ಲಿ ಕರ್ನಾಟಕದ ಮಾತೃಭಾಷೆ, ಕನ್ನಡ ಧ್ವಜ ಹಾಗೂ ನಾಡಗೀತೆಯ ಬಗ್ಗೆ ಸಾಕಷ್ಟು ಬಾರಿ ಚರ್ಚೆ ನಡೆದಿದೆ. ದೇಶದ ಬೇರೆ ರಾಜ್ಯಗಳಲ್ಲಿ ನಾಡಗೀತೆ, ನಾಡಧ್ವಜವಿಲ್ಲ. ಇದು ಕರ್ನಾಟಕದಲ್ಲಿ ಮಾತ್ರ ಇದೆ. 7 ಕೋಟಿ ಕನ್ನಡಿಗರನ್ನು ಕಾಪಾಡುತ್ತಿರುವ ಭುವನೇಶ್ವರಿಗೆ ನಮನ ಸಲ್ಲಿಸಲು ನಮ್ಮ ಸರ್ಕಾರ ಈ ಕಾರ್ಯಕ್ರಮ ಮಾಡಿದೆ. ಸಚಿವರಾದ ಶಿವರಾಜ ತಂಗಡಗಿ ಅವರು ತಮಗೆ ಸಿಕ್ಕ ಈ ಅವಕಾಶವನ್ನು ಸ್ಮರಿಸುತ್ತಿದ್ದರು. ನಿಮ್ಮ ಪ್ರತಿ ಮತಕ್ಕೆ ಎಷ್ಟು ಶಕ್ತಿ ಇದೆ ಎಂಬುದು ಸಾಬೀತಾಗಿದೆ. ನಿಮ್ಮ ಮತಕ್ಕೆ 5 ಗ್ಯಾರಂಟಿ ಅನುಷ್ಠಾನವಾಗಿದೆ, ನಾಮಫಲಕಗಳು ಕನ್ನಡಮಯವಾಗಿವೆ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದ ಮಧ್ಯೆ ತಾಯಿ ಭುವವನೇಶ್ವರಿ ತಾಯಿ ಪ್ರತಿಮೆ ಅನಾವರಣವಾಗಿದೆ” ಎಂದು ತಿಳಿಸಿದರು..

“ಇತ್ತೀಚೆಗೆ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ಮಾಡಲಾಯಿತು. ಈ ಅಧಿವೇಶನ ಕನ್ನಡ ಭಾಷಾವಾರು ಪ್ರಾಂತ್ಯಕ್ಕೆ ಮುನ್ನುಡಿ ಬರೆದ ಐತಿಹಾಸಿಕ ಸಮಾವೇಶವಾಗಿತ್ತು. ಆ ಸಮಾವೇಶದಲ್ಲಿ 16 ವರ್ಷದ ಗಂಗೂಬಾಯಿ ಹಾನಗಲ್ ಅವರು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆಯನ್ನು ಹಾಡಿದ್ದರು” ಎಂದು ತಿಳಿಸಿದರು.

ಕನ್ನಡ ಉಳಿಸಲು ಸಿದ್ದರಾಮಯ್ಯ ಅವರಿಂದ ಅನೇಕ ಕ್ರಮ :

“ಕನ್ನಡವೇ ನಮ್ಮ ತಾಯಿ, ಕನ್ನಡೇ ನಮ್ಮ ದೇವ ಭಾಷೆ, ತುಂಗಾ, ಭದ್ರ, ಕೃಷ್ಣ, ಕಾವೇರಿ ಎಲ್ಲಾ ನದಿಗಳು ನಮ್ಮ ಪಾಲಿನ ಪುಣ್ಯ ತೀರ್ಥಗಳು. ಮನುಷ್ಯನ ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ, ಜನನ ಉಚಿತ ಮರಣ ಖಚಿತ, ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡುತ್ತೇವೆ ಅದು ಜೀವಂತವಾಗಿ ಉಳಿಯುತ್ತದೆ. ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದರು. ಅವತ್ತಿನಿಂದ ಕನ್ನಡದ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದಾರೆ. ಸಚಿವ ಸಂಪುಟದಲ್ಲಿ ಯಾವುದೇ ವಿಚಾರ ಪ್ರಸ್ತಾಪ ಮಾಡಬೇಕಾದರೂ ಕನ್ನಡದ ಕಡತಗಳಲ್ಲೇ ಮಂಡಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ” ಎಂದರು.

“ನಮ್ಮ ಭಾಷೆಯನ್ನು ಮಾತೃಭಾಷೆ ಎನ್ನುತ್ತೇವೆ, ಭೂಮಿಯನ್ನು ಭೂಮಿ ತಾಯಿ ಎನ್ನುತ್ತೇವೆ. ಯಾವುದೇ ಹಳ್ಳಿಗೆ ಹೋದರೂ ಗ್ರಾಮ ದೇವತೆಯನ್ನು ಪೂಜಿಸುತ್ತೇವೆ. ಯಾವುದೇ ಶುಭ ಕಾರ್ಯಕ್ಕೆ ಆಹ್ವಾನ ನೀಡುವಾಗಲೂ ಶ್ರೀಮತಿ ಮತ್ತು ಶ್ರೀ ಎಂದು ಮಹಿಳೆಯರಿಗೆ ಮನ್ನಣೆ ನೀಡುತ್ತಾರೆ. ಲಕ್ಷ್ಮೀ ವೆಂಕಟೇಶ್ವರ ಎಂದು ಶಿವನನ್ನು ಪಾರ್ವತಿ ಪರಮೇಶ್ವರ ಎಂದು ಕರೆಯುತ್ತಾರೆ. ಇದು ನಮ್ಮ ಪರಂಪರೆ. ನಮ್ಮ ನಾಡಿನ ತಾಯಿ ಭುವನೇಶ್ವರಿ ದೇವಿಯನ್ನು ನಿಮ್ಮ ಸಮ್ಮುಖದಲ್ಲಿ ನಾವು ವಿಧಾನಸೌಧದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಿದ್ದೇವೆ. ಆ ತಾಯಿಗೆ ನಮಿಸಿ, ನಿಮ್ಮೆಲ್ಲರಿಗೂ ಶುಭವಾಗಲಿ ಎಂದು ಹಾರೈಸುತ್ತೇನೆ” ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button