ಓರಿಜಿನಲ್ ಕಾಂಗ್ರೆಸ್ ಯಾವುದು? ಡುಪ್ಲಿಕೇಟ್ ಕಾಂಗ್ರೆಸ್ ಯಾವುದು ಖರ್ಗೆ ಉತ್ತರಿಸಲಿ; ಆರ್. ಅಶೋಕ

ಬೆಂಗಳೂರು: ಒಂದೆಡೇ ಎಐಸಿಸಿ ಅಧ್ಯಕ್ಷರಾದ ಖರ್ಗೆ ಕುಂಭಸ್ನಾನದಿಂದ ಪಾಪ ಕಳೆಯಲ್ಲ ಎಂದಿದ್ದಾರೆ. ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಕುಟುಂಬ ಸಮೇತ ಕುಂಭಮೇಳದಲ್ಲಿ ಸ್ನಾನ ಮಾಡಿ ಪಾಪ ಕಳೆದಿರುವ ಹೇಳಿಕೆಯನ್ನು ನೀಡಿದ್ದು, ಇದರಲ್ಲಿ ಓರಿಜಿನಲ್ ಕಾಂಗ್ರೆಸ್ ಯಾವುದು? ಡುಪ್ಲಿಕೇಟ್ ಕಾಂಗ್ರೆಸ್ ಯಾವುದು ಎಂದು ಖರ್ಗೆ ಅವರೇ ಉತ್ತರಿಸಲಿ ಎಂದು ವಿಪಕ್ಷ ನಾಯಕ ಆರ್. ಅಶೋಕ ಸವಾಲು ಹಾಕಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರ ಆದೇಶವನ್ನು ಉಲ್ಲಂಘಿಸಿ ಧೈರ್ಯವನ್ನು ಮಾಡಿ, ಕುಂಭಮೇಳದ ಸ್ನಾನಕ್ಕೆ ಹೋದ ಡಿಸಿಎಂ ಡಿ.ಕೆ. ಶಿವಕುಮಾರ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಉತ್ತರ ಪ್ರದೇಶದ ಸರ್ಕಾರ ವ್ಯವಸ್ಥೆಗೆ ಡಿ.ಕೆ.ಶಿವಕುಮಾರ ಅವರು ಶ್ಲಾಘನೆಯನ್ನು ಮಾಡಿದ್ದಾರೆ. ಕರ್ನಾಟಕದ ಅಧ್ಯಕ್ಷರೇ ಕುಂಭಮೇಳದಲ್ಲಿ ಸ್ನಾನ ಮಾಡಿ ಪಾಪ ಕಳೆದಿರುವ ಹೇಳಿಕೆ ನೀಡಿದ್ದಾರೆ. ಯಾರನ್ನ ನಂಬಬೇಕು ಯಾವುದೇ ಡುಪ್ಲಿಕೇಟ್ ಕಾಂಗ್ರೆಸ್ ಖರ್ಗೆಯವರೇ ಉತ್ತರ ಕೊಡಲಿ ಎಂದರು.
ಉದಯಗಿರಿಯೂ ಕೇರಳಕ್ಕೆ ಹತ್ತಿರವಾಗಿದ್ದು, ಅಲ್ಲಿರುವ ಹಿಂದೂಗಳ ಹತ್ಯೆಗಳನ್ನು ನಡೆಸಲಾಗುತ್ತಿದೆ. ಅಲ್ಲಿರುವ ಹಿಂದೂಗಳ ರಕ್ಷಣೆಗೆ ಬಿಜೆಪಿ ನಿಲ್ಲಲಿದೆ. ರಾಜ್ಯದಲ್ಲಿ ಮರಳು ದಂಧೆಯನ್ನು ತಡೆಯಲು ಸಾಧ್ಯವೇಯಿಲ್ಲ. ಕಾಂಗ್ರೆಸ್ಸಿನ ಶಾಸಕರಿಗೆ ಅಭಿವೃದ್ಧಿಗೆ ಅನುದಾನ ಬೇಕಾದರೇ ಅಧಿಕಾರಿಗಳ ವರ್ಗಾವಣೆ ಬಿಟ್ಟರೇ, ಮರಳು ಮಾಫಿಯಾ ಎರಡೇ ದಾರಿಗಳಿವೆ. ಸಂಪೂರ್ಣ ರಾಜ್ಯದಲ್ಲೇ ಇದೆ ಪರಿಸ್ಥಿತಿಯಿದೆ. ಭದ್ರವತಿಯಲ್ಲಿ ಮಹಿಳಾ ಪೊಲೀಸರ ಮೇಲೆಯಾದ ಹಲ್ಲೆಯನ್ನು ಮುಚ್ಚಿ ಹಾಕಲಾಗಿದೆ ಎಂದರು.
ಇನ್ನು ಯತ್ನಾಳ ಮತ್ತು ಬಿ.ವೈ ವಿಜಯೇಂದ್ರ ಭಿನ್ನಾಭಿಪ್ರಾಯದ ಕುರಿತು ಮಾತನಾಡಿದ ಅವರು ಕೇಂದ್ರದ ನಾಯಕರು ಈ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ಆದೇಶ ನೀಡಿದ್ದಾರೆ. ದೆಹಲಿಯ ಮಟ್ಟಕ್ಕೆ ಈ ವಿಷಯ ತಲುಪಿದ್ದು, ಕೇಂದ್ರದ ನಾಯಕರೇ ಇದನ್ನು ಗಮನಿಸುತ್ತಾರೆ. ಸ್ವಲ್ಪ ದಿನದಲ್ಲೇ ಇದಕ್ಕೆ ಅಂತಿಮ ತೆರೆ ಬೀಳಲಿದೆ ಎಂದರು.