ಬೆಳಗಾವಿ

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ನಮ್ಮ ಕೈಯಲ್ಲಿಲ್ಲ, ಹೈಕಮಾಂಡ್ ನಿರ್ಧರಿಸಲಿದೆ; ಸತೀಶ ಜಾರಕಿಹೊಳಿ

ಬೆಳಗಾವಿ: ”ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಈಗಿರುವವರನ್ನೇ ಮುಂದುವರಿಸಬೇಕಾ? ಅಥವಾ ಹೊಸಬರಿಗೆ ಅವಕಾಶ ನೀಡಬೇಕಾ ಎಂಬುದು ಪಕ್ಷದ ಹಂತದಲ್ಲಿ ಚರ್ಚೆ ಆಗಬೇಕು.‌ ಇದು ನಮ್ಮ ಹಂತದಲ್ಲಿ ಆಗುವಂತದ್ದಲ್ಲ.‌ ಹೈಕಮಾಂಡ್ ನಿರ್ಧರಿಸಲಿದೆ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ”ಒಬ್ಬೊಬ್ಬರು ಎರಡೂ ಹುದ್ದೆಯಲ್ಲಿದ್ದರೆ ಜವಾಬ್ದಾರಿ ನಿರ್ವಹಿಸುವುದು ಕಷ್ಟ ಆಗುತ್ತದೆ. ಆದರೆ, ಅದು ನಮ್ಮ ಹಂತದಲ್ಲಿ ಇಲ್ಲ. ಹಾಗಾಗಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡುವ ನಿರ್ಧಾರ ಎಐಸಿಸಿಗೆ ಮಾತ್ರ ಇದೆ” ಎಂದು ಹೇಳಿದರು.

”ಬೆಳಗಾವಿ ‌ಜಿಲ್ಲಾಧ್ಯಕ್ಷರ ನೇಮಕ ವಿಚಾರಕ್ಕೆ ಎಲ್ಲರೂ ಸೇರಿ ಚರ್ಚೆ ಮಾಡಿ, ಪಕ್ಷದ ಕೆಲಸಕ್ಕೆ ಯಾರು ಹೆಚ್ಚು ಸಮಯ ಕೊಡುತ್ತಾರೋ ಅಂತಹ ಒಬ್ಬರ ಹೆಸರು ಕೊಟ್ಟಿದ್ದೇವೆ.‌ ಎರಡು ಹೆಸರು ಕೊಟ್ಟಿಲ್ಲ. ಒಬ್ಬರನ್ನೇ ಅಧ್ಯಕ್ಷರನ್ನಾಗಿ ಮಾಡುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದೇವೆ. ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ಅಧ್ಯಕ್ಷರು ಈಗಾಗಲೇ ಒಂದು ಹುದ್ದೆಯಲ್ಲಿದ್ದಾರೆ. ಹಾಗಾಗಿ, ಎರಡೂ ಬದಲಾವಣೆ ಮಾಡುತ್ತೇವೆ” ಎಂದು ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಕಾರ್ಯಕರ್ತರಿಗೆ ಜಿಲ್ಲಾಧ್ಯಕ್ಷ ಸ್ಥಾನ: ಬೆಳಗಾವಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮೃಣಾಲ್ ಹೆಬ್ಬಾಳ್ಕರ್ ಹೆಸರು ಕೇಳಿ ಬಂದಿರುವ ಕುರಿತ ಪ್ರಶ್ನೆಗೆ, ”ಆ ರೀತಿ ಯಾವುದೇ ಚರ್ಚೆ ಆಗಿಲ್ಲ. ಒಂದೇ ಹೆಸರು ಕೊಟ್ಟಿದ್ದೇವೆ‌. ಪಕ್ಷ ಸಂಘಟನೆಗೆ ಹೆಚ್ಚು ಸಮಯ ನೀಡಬೇಕು‌. ಅಧ್ಯಕ್ಷರಾದವರು ಕಾಂಗ್ರೆಸ್ ಕಚೇರಿಯಲ್ಲಿ ಹೆಚ್ಚು ಇರಬೇಕು. ಕಾರ್ಯಕರ್ತರ ಜೊತೆಗೆ ನಿರಂತರ ಸಂಪರ್ಕ ಹೊಂದಿರಬೇಕು. ಇದೇ ಮಾನದಂಡವಾಗಿದೆ. ಹಾಗಾಗಿ, ಸಾಮಾನ್ಯ ಕಾರ್ಯಕರ್ತರಿಗೆ ಜಿಲ್ಲಾಧ್ಯಕ್ಷ ಸ್ಥಾನ ಕೊಡಿಸಲು ಪ್ರಯತ್ನಿಸುತ್ತೇವೆ” ಎಂದರು.

”ನಿಗಮ ಮಂಡಳಿಗಳ ಅಧ್ಯಕ್ಷರನ್ನು ನೇಮಕ ಮಾಡುವ ಅಧಿಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿದೆ. ಈಗಾಗಲೇ ಶೇ. 70 ಆಗಿದ್ದು, ಇನ್ನು ಶೇ. 30 ಆಗಬೇಕಿದೆ. ನಮಗೆ ನಿರ್ದೇಶಕರು, ಸದಸ್ಯರನ್ನು ಮಾಡುವ ಜವಾಬ್ದಾರಿ ಮಾತ್ರವಿದೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್​ ನೇತೃತ್ವದಲ್ಲಿ ಕಮಿಟಿ ಇದೆ. ಹಂತ – ಹಂತವಾಗಿ ನೇಮಕ ಮಾಡಲಾಗುವುದು” ಎಂದು ಹೇಳಿದರು”ಬೆಳಗಾವಿ ಜಿಲ್ಲೆಯ ವಿಭಜನೆ ವಿಷಯ ಬಜೆಟ್​​ನಲ್ಲಿ ಇಲ್ಲ. ಹೊಸ ಜಿಲ್ಲೆಯಾಗಬೇಕು ಎಂಬ ಆಶಯ ಇದೆ. ಇವತ್ತೇ ಆಗುತ್ತೆ ಅಂತಾ ಹೇಳಲು ಆಗುವುದಿಲ್ಲ. ಯಾಕೆಂದರೆ ದೊಡ್ಡ ಜಿಲ್ಲೆ ಇದೆ. ಜಿಲ್ಲಾ ವಿಭಜನೆಯಾದರೆ ಒಳ್ಳೆಯದಾಗುತ್ತದೆ. ಆದರೆ, ಅದಕ್ಕೆ ಎಲ್ಲ ರೀತಿಯಿಂದ ಒಮ್ಮತ ಬರಬೇಕು ಅಷ್ಟೇ” ಎಂದು ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದರು.

Related Articles

Leave a Reply

Your email address will not be published. Required fields are marked *

Back to top button