
ಧಾರವಾಡ : ರೈತ ಬಂಡಾಯದ ನಾಡು ನವಲಗುಂದ ಪಟ್ಟಣ ಸದಾ ಜನದಟ್ಟಣೆಯಿಂದ ಕೂಡಿರುತ್ತದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಮಾಡಬೇಕು ಎಂಬ ಕೂಗಿಗೆ ಕೊನೆಗೂ ಕಾಲ ಕೂಡಿ ಬಂದಿದೆ. ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಬರುವ ಪ್ರಮುಖ ಪ್ರದೇಶ ನವಲಗುಂದ. ಹೀಗಾಗಿ ಈ ಪಟ್ಟಣ ಬೆಳೆದರೂ ಇಲ್ಲಿರುವ ಹೆದ್ದಾರಿ ಪಟ್ಟಣದೊಳಗೆ ಹಾದು ಹೋಗುವಂತಿದೆ. ಹೀಗಾಗಿ, ನವಲಗುಂದ ಪಟ್ಟಣಕ್ಕೆ ಬೈಪಾಸ್ ಮಾಡಬೇಕು ಎಂಬ ಬೇಡಿಕೆ ಬಹಳ ವರ್ಷಗಳಿಂದ ಇತ್ತು. ಅದು ಈಗ ಈಡೇರಲಿದೆ.
ಧಾರವಾಡ ಜಿಲ್ಲೆಯ ನವಲಗುಂದ ರೈತ ಬಂಡಾಯದ ಪ್ರಮುಖ ನೆಲೆಯಾಗಿದೆ. ಹೀಗಾಗಿ ಪ್ರತಿಭಟನೆಗಳು ನಡೆಯುವುದು ಸಾಮಾನ್ಯವಾಗಿದೆ. ಸಣ್ಣ ಪ್ರತಿಭಟನೆ ನಡೆದರೂ ಹುಬ್ಬಳ್ಳಿ – ವಿಜಯಪುರ ಹೆದ್ದಾರಿ ಸಂಪರ್ಕವೇ ಸ್ತಬ್ಧಗೊಳ್ಳುತ್ತಿತ್ತು. ಗಂಟೆಗಟ್ಟಲೇ ನವಲಗುಂದ ಪಟ್ಟಣದಲ್ಲಿಯೇ ವಾಹನಗಳು ಸಿಲುಕಿಕೊಳ್ಳುತ್ತಿದ್ದವು. ಹೀಗಾಗಿ ಈ ಪಟ್ಟಣಕ್ಕೆ ಬೈಪಾಸ್ ನಿರ್ಮಿಸಬೇಕು ಎಂಬುದು 30 ವರ್ಷಗಳ ಬೇಡಿಕೆ ಆಗಿತ್ತು. ಆ ಬೇಡಿಕೆ ಈಗ ಕೊನೆಗೂ ಈಡೇರಿದ್ದು, ಅಂದಾಜು 400 ಕೋಟಿ ರೂಪಾಯಿ ವೆಚ್ಚದಲ್ಲಿ ನವಲಗುಂದ ಪಟ್ಟಣಕ್ಕೆ ಬೈಪಾಸ್ ನಿರ್ಮಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ನವಲಗುಂದಕ್ಕೆ ನೂತನ ಹೈಟೆಕ್ ಬೈಪಾಸ್:
ಈ ಕುರಿತು ಶಾಸಕ ಎನ್. ಹೆಚ್. ಕೋನರೆಡ್ಡಿ ಅವರು ಮಾತನಾಡಿ, ನವಲಗುಂದ ಬೈಪಾಸ್ ಆಗಬೇಕೆಂದು ಹೇಳಿ ಚರ್ಚೆ ನಡೆದಿತ್ತು. ಈಗ ನಾನು ಶಾಸಕನಾದ ಅವಧಿಯಲ್ಲಿ ಅದು ಈಡೇರುತ್ತಿದೆ. ಸಿಎಂ ಸಿದ್ದರಾಮಯ್ಯನವರು, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಪ್ರಸ್ತಾವನೆಯನ್ನ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟರು.
ನಂತರ ನಮ್ಮ ಭಾಗದ ಸಂಸದರಾದ ಪ್ರಹ್ಲಾದ್ ಜೋಶಿ ಹಾಗೂ ಎಲ್ಲರೂ ಪ್ರಯತ್ನ ಮಾಡಿದರು. ಅದಕ್ಕೆ ನಿತಿನ್ ಗಡ್ಕರಿಯವರು ಸಹಕಾರ ನೀಡಿದರು. ಹೀಗಾಗಿ ನೂತನ ಹೈಟೆಕ್ ಬೈಪಾಸ್ ನವಲಗುಂದಕ್ಕೆ ಬರುತ್ತಿದೆ. ಈಗಾಗಲೇ ಫೈನಾನ್ಸ್ಗೆ ಹೋಗಿದೆ. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಡಿಪಿಆರ್ ಮಾಡಿದ್ದಾರೆ. ಅದನ್ನ ದೆಹಲಿಗೆ ಕಳುಹಿಸಿದ್ದಾರೆ. ಕೂಡಲೇ ಮಂಜೂರು ಆದ್ರೆ 6 ತಿಂಗಳೊಳಗೆ ಕೆಲಸ ಪ್ರಾರಂಭವಾಗುತ್ತೆ ಎಂದರು.