
ಎಲ್ಲವು ಅಂದುಕೊಂಡಂತೆ ನಡೆದಿದ್ದರೆ ಇಂದು ಧಾರವಾಡ ಪಿಡಬ್ಲುಡಿಯ ಮುಖ್ಯ ಇಂಜಿನಿಯರ್ ಎಚ್ ಸುರೇಶರವರು ತಮ್ಮ ನಿವೃತ್ತಿ ಕಾರ್ಯಕ್ರಮದ ಸಂಭ್ರಮದಲ್ಲಿ ಬ್ಯೂಸಿಯಾಗಬೇಕಿತ್ತು. ಆದರೆ ಆ ಸಂಭ್ರಮಕ್ಕೆ ಲೋಕಾಯುಕ್ತರು ದಾಳಿ ನಡೆಸುವ ಮೂಲಕ ಶಾಕ್ ನೀಡಿ ಸಂಭ್ರಮಕ್ಕೆ ಬ್ರೇಕ್ ಹಾಕಿದ್ದಾರೆ.
ಹೌದು ಧಾರವಾಡ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಎಚ್ ಸುರೇಶ ಅವರು ಇಂದು ತಮ್ಮ ವೃತಿಯ ಕೊನೆಯದಿನವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಧಾರವಾಡ ನಗರದ ಮಗದುಮ್ಮ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದರೆ ಇಂದು ಮುಂಜಾನೆಯೇ ಲೋಕಾಯುಕ್ತ ಅಧಿಕಾರಿಗಳು ಧಾರವಾಡ ಹಾಗೂ ಬೆಳಗಾವಿ ನಿವಾಸದ ಮೇಲೆ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಧಾರವಾಡದ ಕೆಸಿಡಿ ಗಣಪತಿ ದೇವಸ್ಥಾನದ ಹಿಂಭಾಗದಲ್ಲಿರುವ ಅವರ ಸರ್ಕಾರಿ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಹಲವು ಕಡೆ ಅಕ್ರಮ ಆಸ್ತಿ ಹಾಗೂ ಆದಾಯ ಮೀರಿ ಗಳಿಕೆ ಮಾಡಿರುವ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಸುರೇಶ್ ಅವರ ಸರ್ಕಾರಿ ನಿವಾಸದ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಧಾರವಾಡ, ಬೆಳಗಾವಿ ಸೇರಿದಂತೆ ಅನೇಕ ಕಡೆಗಳಲ್ಲಿ ಸುರೇಶ ಅವರು ಅಕ್ರಮ ಆಸ್ತಿ ಮಾಡಿದ್ದಾರೆ ಎಂಬ ಆರೋಪವಿದೆ.
ಈ ಆರೋಪದ ಮೇಲೆಯೇ ಇದೀಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.