Uncategorized

ಮಾಟ-ಮಂತ್ರ ಮಾಡುತ್ತಿದ್ದ ಪೂಜಾರಿಯ ಬರ್ಬರ ಹತ್ಯೆ: ಅಮಾವಾಸ್ಯೆ ಪೂಜೆ ಮುಗಿಸಿ ವಾಪಸ್ ಬರುತ್ತಿದ್ದಾಗ ಲಾಂಗ್‌ನಿಂದ ಕೊಚ್ಚಿ ಕೊಲೆ

ಮಾಟ-ಮಂತ್ರ ಮಾಡುತ್ತಿದ್ದ ಪೂಜಾರಿಯ ಬರ್ಬರ ಹತ್ಯೆ: ಅಮಾವಾಸ್ಯೆ ಪೂಜೆ ಮುಗಿಸಿ ವಾಪಸ್ ಬರುತ್ತಿದ್ದಾಗ ಲಾಂಗ್‌ನಿಂದ ಕೊಚ್ಚಿ ಕೊಲೆ
ಕೋಲಾರ, ಜನವರಿ 19: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹರಳೇರಿ ಸಮೀಪ ಭೀಕರ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಹುಲ್ಕೂರು ಗ್ರಾಮದ ಕಾಳಿ ದೇವಾಲಯದ ಪೂಜಾರಿ ಆಂಜಿ ಅಲಿಯಾಸ್ ಆಂಜಿನಪ್ಪ (45) ಅವರನ್ನು ಪುಷ್ಯ ಅಮಾವಾಸ್ಯೆ ಪೂಜೆ ಮುಗಿಸಿ ಬೈಕ್‌ನಲ್ಲಿ ಮನೆಗೆ ವಾಪಸ್ ಬರುತ್ತಿದ್ದ ವೇಳೆ ದುಷ್ಕರ್ಮಿಗಳು ಅಡ್ಡಗಟ್ಟಿ, ಮುಖಕ್ಕೆ ಖಾರದ ಪುಡಿ ಎರಚಿ ಲಾಂಗ್‌ನಿಂದ ಮನಬಂದಂತೆ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಮೃತ ಆಂಜಿನಪ್ಪ ಕಾಳಿ ದೇವಾಲಯದಲ್ಲಿ ಪೂಜೆ ನಡೆಸುವುದರ ಜೊತೆಗೆ, ಮಾಟ-ಮಂತ್ರ, ದೆವ್ವ ಬಿಡಿಸುವ ಪೂಜೆಗಳನ್ನು ಮಾಡುತ್ತಿದ್ದರು. ಅಲ್ಲದೆ ಮಾಲೂರಿನಲ್ಲಿ ಬೂಸಾ ಅಂಗಡಿ ನಡೆಸಿ ಜೀವನ ಸಾಗಿಸುತ್ತಿದ್ದರು.
ಅಮಾವಾಸ್ಯೆ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಮುಗಿಸಿಕೊಂಡು ಹಿಂದಿರುಗುತ್ತಿದ್ದ ವೇಳೆ ಈ ಕೃತ್ಯ ನಡೆದಿದೆ.
ಘಟನಾ ಸ್ಥಳಕ್ಕೆ ಮಾಲೂರು ಪೊಲೀಸರು, ಶ್ವಾನದಳ ಹಾಗೂ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ವೈಯಕ್ತಿಕ ದ್ವೇಷ, ಹಣಕಾಸಿನ ವ್ಯವಹಾರ ಅಥವಾ ಸ್ಮಶಾನ ಜಾಗದ ವಿವಾದ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೂಜಾರಿಗೆ ಮೊದಲ ಪತ್ನಿಯಿಂದ ಇಬ್ಬರು ಮಕ್ಕಳಿದ್ದು, ಐದು ವರ್ಷಗಳ ಹಿಂದೆ ಮತ್ತೊಂದು ಮದುವೆಯಾಗಿದ್ದರು ಎಂದು ತಿಳಿದುಬಂದಿದೆ. ದೇವಾಲಯಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಬರುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಮೂಲಗಳು:
TV9 Kannada

Asianet Suvarna News

See less

Related Articles

Leave a Reply

Your email address will not be published. Required fields are marked *

Back to top button