Uncategorized

ಇ-ಖಾತಾ ಮತ್ತು ಕಾವೇರಿ-2 ತಂತ್ರಾಂಶದಲ್ಲಿ ಇತ್ತೀಚೆಗೆ ತರಲಾದ ಬದಲಾವಣೆಗಳಿಂದ ಬೆಳಗಾವಿಯಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಸಂಪೂರ್ಣ ಕಗ್ಗಂಟಾಗಿದೆ.

ಇ-ಖಾತಾ ಮತ್ತು ಕಾವೇರಿ-2 ತಂತ್ರಾಂಶದಲ್ಲಿ ಇತ್ತೀಚೆಗೆ ತರಲಾದ ಬದಲಾವಣೆಗಳಿಂದ ಬೆಳಗಾವಿಯಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಸಂಪೂರ್ಣ ಕಗ್ಗಂಟಾಗಿದೆ. ಇದರಿಂದ ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ಕ್ಷೇತ್ರ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಮಸ್ಯೆ ಪರಿಹರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಕ್ಷಣ ಮಧ್ಯಪ್ರವೇಶಿಸಬೇಕೆಂದು ಬೆಳಗಾವಿ ಕ್ರೆಡೈ ಕಳಕಳಿಯ ಮನವಿ ಮಾಡಿದೆ
.
ಬೆಳಗಾವಿ ಕ್ರೆಡೈ ಅಧ್ಯಕ್ಷ ಯುವರಾಜ ಹುಲಜಿ, ಕಾರ್ಯದರ್ಶಿ ಪ್ರಶಾಂತ ವಾಂಡ್ಕರ್ ಹಾಗೂ ಅಮರ್ ಅಕ್ನೋಜಿ ನೇತೃತ್ವದ ನಿಯೋಗವು ಮುಖ್ಯಮಂತ್ರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ, ಇ-ಖಾತಾ ಮತ್ತು ಕಾವೇರಿ-2 ತಾಂತ್ರಿಕ ಲೋಪಗಳಿಂದಾಗಿ ಟಿಳಕವಾಡಿ, ಸಂಕೇಶ್ವರ ಸೇರಿದಂತೆ ಹಲವು ಪ್ರದೇಶಗಳಲ್ಲಿ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂದು ದೂರಿದ್ದಾರೆ. ವಿಶೇಷವಾಗಿ ಟಿಳಕವಾಡಿ, ನೆಹರು ನಗರ, ಮುಜಾವರ್ ಗಲ್ಲಿ ಮುಂತಾದೆಡೆ ಇರುವ 70 ರಿಂದ 100 ವರ್ಷಗಳ ಹಳೆಯ ‘ನಿರಂತರ ಪಟ್ಟಾ’ (Perpetual Lease) ಆಸ್ತಿಗಳ ನೋಂದಣಿಗೆ ಮೂಲ ಭೂಮಾಲೀಕರ ಹಾಜರಾತಿ ಕಡ್ಡಾಯಗೊಳಿಸಿರುವುದು ಮತ್ತು ಜಿಪಿಎ ವ್ಯವಹಾರಗಳಿಗೆ ಕೇವಲ 7 ದಿನಗಳ ಅವಧಿಯ ಲೈಫ್ ಸರ್ಟಿಫಿಕೇಟ್ ನಿಯಮ ಜಾರಿಗೊಳಿಸಿರುವುದು ಸಾರ್ವಜನಿಕರನ್ನು ಹಾಗೂ ಬಿಲ್ಡರ್‌ಗಳನ್ನು ಸಂಕಷ್ಟಕ್ಕೆ ತಳ್ಳಿದೆ.
ಇದರಿಂದಾಗಿ 2025-26ನೇ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಸರ್ಕಾರಕ್ಕೆ ಸುಮಾರು ₹5,000 ಕೋಟಿ ಆದಾಯ ನಷ್ಟ ಉಂಟಾಗುವ ಆತಂಕ ಎದುರಾಗಿದ್ದು, ನಿರ್ಮಾಣ ರಂಗವನ್ನೇ ನಂಬಿರುವ ಸಾವಿರಾರು ದಿನಗೂಲಿ ಕಾರ್ಮಿಕರ ಜೀವನೋಪಾಯಕ್ಕೆ ಧಕ್ಕೆ ಬಂದಿದೆ. ಆದ್ದರಿಂದ ಸರ್ಕಾರವು ಕೂಡಲೇ ನಿಯಮಗಳನ್ನು ಸಡಿಲಿಸಿ, ಅಧಿಕೃತ ಸಹಿ ಮಾಡುವವರಿಗೆ ಅವಕಾಶ ಕಲ್ಪಿಸಿಕೊಡುವ ಮೂಲಕ ಆಸ್ತಿ ಮಾರುಕಟ್ಟೆಯನ್ನು ಸಹಜ ಸ್ಥಿತಿಗೆ ತರಬೇಕೆಂದು ಕ್ರೆಡೈ ಒತ್ತಾಯಿಸಿದೆ.

Related Articles

Leave a Reply

Your email address will not be published. Required fields are marked *

Back to top button