Uncategorized

ಅಡುಗೆ ಅನಿಲ ಸಿಲಿಂಡರ್ ದರ ಮತ್ತೊಮ್ಮೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸಚಿವ ಎಂ.ಬಿ. ಪಾಟೀಲ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಅಡುಗೆ ಅನಿಲ ಸಿಲಿಂಡರ್ ದರ ಮತ್ತೊಮ್ಮೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸಚಿವ ಎಂ.ಬಿ. ಪಾಟೀಲ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಅಚ್ಛೇ ದಿನ್ ಬರುತ್ತವೆ ಎಂದು ಹೇಳಿದ್ದ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ದರಗಳನ್ನು ನಿರಂತರವಾಗಿ ಹೆಚ್ಚಿಸುತ್ತಿದೆ. ಇದೇನಾ ಅಚ್ಛೇ ದಿನ್?” ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಆದರೆ ಕಳೆದ 12 ವರ್ಷಗಳಲ್ಲಿ 24 ಕೋಟಿ ಉದ್ಯೋಗಗಳು ಸೃಷ್ಟಿಯಾಗಿಲ್ಲ ಎಂದು ಆರೋಪಿಸಿದರು. ರೈತರಿಗೆ ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ದೊರೆಯುತ್ತಿಲ್ಲ. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದು ಕೇಂದ್ರ ಸರ್ಕಾರದ ವೈಫಲ್ಯ ಎಂದು ಟೀಕಿಸಿದರು.
ಇದೇ ವೇಳೆ ಕಾಂಗ್ರೆಸ್‌ನಲ್ಲಿನ ಭಿನ್ನಾಭಿಪ್ರಾಯಗಳ ಕುರಿತು ಪ್ರತಿಕ್ರಿಯಿಸಿದ ಅವರು, ಸಚಿವ ರಾಮಲಿಂಗಾರೆಡ್ಡಿ ನಡೆಸಿದ ಸಂಧಾನ ಯಶಸ್ವಿಯಾಗಿದೆ ಎಂದು ಹೇಳಿದರು. ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಕೂಡ ಜಗಳ ಮಾಡುತ್ತೇವೆ. ಕುಟುಂಬ ಅಂದಮೇಲೆ ಅಸಮಾಧಾನ, ಭಿನ್ನಾಭಿಪ್ರಾಯಗಳು ಸಹಜ. ನಮ್ಮ ಮನೆ, ನಿಮ್ಮ ಮನೆ ಎಲ್ಲೆಡೆ ಜಗಳ ಇರುತ್ತದೆ. ಪಕ್ಷದೊಳಗಿನ ಎಲ್ಲ ಸಮಸ್ಯೆಗಳನ್ನು ಪಕ್ಷವೇ ಬಗೆಹರಿಸುತ್ತದೆ. ಈಗಾಗಲೇ ಸಂಧಾನ ಯಶಸ್ವಿಯಾಗಿದೆ” ಎಂದು ಹೇಳಿದರು. ಇನ್ನೂ ವಿಜಯಪುರ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದು ಸಚಿವ ಎಂ.ಬಿ. ಪಾಟೀಲ ಭರವಸೆ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ಸಚಿವರು ನಗರದ ಬುದ್ಧ ವಿಹಾರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ತಮಗೆ ಸಚಿವ ಸ್ಥಾನ ಲಭಿಸಿದ ಹಿನ್ನೆಲೆಯಲ್ಲಿ ಈ ಭೇಟಿ ನೀಡಿದ್ದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ, ‘ನನಗೆ ಸಚಿವ ಸ್ಥಾನ ಮತ್ತೆ ಲಭಿಸಿದ ಹಿನ್ನೆಲೆ, ಇಂದು ಬುದ್ಧ ವಿಹಾರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದೇನೆ’ ಎಂದು ಪಾಟೀಲ್ ಹೇಳಿದರು.

Related Articles

Leave a Reply

Your email address will not be published. Required fields are marked *

Back to top button