ಇನ್ಮುಂದೆಯಾದರೂ ಸಾರ್ವಜನಿಕರು ಎಚ್ಚೆತ್ತುಕೊಳ್ಳಲಿ ಎಂಬ ಕಾರಣಕ್ಕೆ ಸಿಐಡಿ ಉನ್ನತಾಧಿಕಾರಿ ಭೀಮಾ ಶಂಕರ್ ಗುಳೇದ್ ಇಂದು ಈ ಮಾಹಿತಿ

ದಾಳಿ ನಡೆದು, ನೀಲಣ್ಣವರ್ ಅರೆಸ್ಟ ಮಾಡಿ ಎಫ್‌ಐಆರ್ ದಾಖಲಾದ ಮೇಲೂ ಸಾರ್ವಜನಿಕರು ಶಿವಂ ಸಂಸ್ಥೆಗೆ ಮತ್ತೆ 5 ಕೋಟಿ ರೂ. ಹೂಡಿಕೆ ಮಾಡಿದ್ದಾರೆ!
ಇನ್ಮುಂದೆಯಾದರೂ ಸಾರ್ವಜನಿಕರು ಎಚ್ಚೆತ್ತುಕೊಳ್ಳಲಿ ಎಂಬ ಕಾರಣಕ್ಕೆ ಸಿಐಡಿ ಉನ್ನತಾಧಿಕಾರಿ ಭೀಮಾ ಶಂಕರ್ ಗುಳೇದ್ ಇಂದು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
💥 ಸಿಐಡಿ ತನಿಖೆಯಲ್ಲಿ ಬಯಲಾದ ಶಾಕಿಂಗ್ ಸತ್ಯಗಳು:
ಹೊಸಬರ ಹಣ ಹಳಬರಿಗೆ ಬಡ್ಡಿ (ಪೊಂಜಿ ಸ್ಕೀಮ್): ಶಿವಾನಂದ ಈವರೆಗೆ 40,700 ಹೂಡಿಕೆದಾರರಿಂದ ಒಟ್ಟು 2,400 ಕೋಟಿ ರೂ. ಸಂಗ್ರಹಿಸಿದ್ದಾನೆ. ಹೊಸದಾಗಿ ಬರುತ್ತಿದ್ದ ಹೂಡಿಕೆದಾರರ ಹಣವನ್ನು ಹಳಬರಿಗೆ ಬಡ್ಡಿಯ ರೂಪದಲ್ಲಿ ಹಂಚುತ್ತಿದ್ದ. ಆದರೆ ಹೊಸ ಹಣ ಬರುವುದು ಕಡಿಮೆಯಾಗಿ, ಹಳಬರ ಬಡ್ಡಿ ಮೊತ್ತ ಹೆಚ್ಚಾದಾಗ ಇಡೀ ವ್ಯವಸ್ಥೆ ಕುಸಿದು ಬಿದ್ದು ವಂಚನೆ ಬಯಲಾಗಿದೆ.
ಷೇರು ಮಾರುಕಟ್ಟೆಯಲ್ಲಿ ನಷ್ಟ, ಸ್ವಂತಕ್ಕೆ ಬಳಕೆ: ಸಂಗ್ರಹಿಸಿದ ಹಣದಲ್ಲಿ 540 ಕೋಟಿ ರೂ.ಗಳನ್ನು ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿ, ಅದರಲ್ಲಿ 170 ಕೋಟಿ ರೂ. ನಷ್ಟ ಮಾಡಿಕೊಂಡಿದ್ದಾನೆ. ಅಲ್ಲದೆ ನಿಯಮಬಾಹಿರವಾಗಿ 55 ಕೋಟಿ ರೂ.ಗಳನ್ನು ತನ್ನ ವೈಯಕ್ತಿಕ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಸದ್ಯದ ತನಿಖೆಯಲ್ಲಿ 660 ಕೋಟಿ ರೂ. ಕೊರತೆ ಕಂಡುಬಂದಿದ್ದು, ಇದರಲ್ಲಿ 330 ಕೋಟಿ ರೂ. ರಿಕವರಿ ಮಾಡಬಹುದು ಎಂದು ಅಂದಾಜಿಸಲಾಗಿದೆ.
ಐಷಾರಾಮಿ ಕಾರುಗಳ ಜಪ್ತಿ & ಸಿನಿಮಾ ಸ್ಟಾರ್‌ಗಳಿಗೆ ನೋಟಿಸ್: ಆರೋಪಿಯಿಂದ ಈಗಾಗಲೇ 5 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದ್ದು, ಸಂಸ್ಥೆಯ ಹಣದಲ್ಲಿ ಖರೀದಿಸಲಾಗಿದ್ದ ಇನ್ನುಳಿದ 11 ವೋಲ್ವೋ XC90 ಕಾರುಗಳನ್ನು ಶೀಘ್ರದಲ್ಲೇ ವಶಪಡಿಸಿಕೊಳ್ಳಲಾಗುವುದು. ಸಿನಿಮಾ ಸ್ಟಾರ್‌ಗಳಿಗೂ ಈ ಸಂಸ್ಥೆಯಿಂದ ಹಣ ಸಂದಾಯವಾಗಿರುವ ಶಂಕೆ ಇದ್ದು, ಸಾಕ್ಷ್ಯ ಸಿಕ್ಕರೆ ಸಿನೆಮಾ ತಾರೆಯರಿಗೂ ನೋಟಿಸ್ ನೀಡಿ ವಿಚಾರಣೆಗೆ ಕರೆಯಲಾಗುವುದು ಎಂದು ಡಿಐಜಿಪಿ ಎಚ್ಚರಿಸಿದ್ದಾರೆ.
ಒಂದೇ ಖಾತೆಯಲ್ಲಿ 36,200 ಪುಟಗಳ ದಾಖಲೆ!: ತನಿಖೆಯ ವೇಳೆ ಒಟ್ಟು 30 ಬ್ಯಾಂಕ್ ಖಾತೆಗಳು ಪತ್ತೆಯಾಗಿದ್ದು, ಇವುಗಳಲ್ಲಿ 7 ಖಾತೆಗಳಲ್ಲಿ ಭಾರಿ ಪ್ರಮಾಣದ ಹಣ ವರ್ಗಾವಣೆಯಾಗಿದೆ. ಕೇವಲ ಒಂದೇ ಒಂದು ಬ್ಯಾಂಕ್ ಖಾತೆಯಲ್ಲಿ ಬರೋಬ್ಬರಿ 36,200 ಪುಟಗಳಷ್ಟು ದೀರ್ಘಾವಧಿಯ ವಹಿವಾಟಿನ ದಾಖಲೆ ಪತ್ತೆಯಾಗಿದೆ!
ಮಹಾರಾಷ್ಟ್ರ ಲಿಂಕ್: ಈ ವಂಚನೆಯ ಜಾಲ ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲೂ ಭಾರಿ ಪ್ರಮಾಣದಲ್ಲಿ ಹರಡಿದ್ದು, ಮಹಾರಾಷ್ಟ್ರ ಪೊಲೀಸರ ಸಹಕಾರದೊಂದಿಗೆ ತನಿಖೆಯನ್ನು ತೀವ್ರಗೊಳಿಸಲಾಗಿದೆ.
💰 ಸಾರ್ವಜನಿಕರ ಹಣ ಮರುಪಾವತಿ ಹೇಗೆ?
ಈ ಹಿಂದೆ ಹೂಡಿಕೆದಾರರಿಗೆ ನಿಯಮಬಾಹಿರವಾಗಿ ಹೋಗಿರುವ 400 ಕೋಟಿ ರೂ. ಹೆಚ್ಚುವರಿ ಹಣವನ್ನು ವಾಪಸ್ ಪಡೆದು ಬಾಕಿ ಉಳಿದಿರುವ ಹೂಡಿಕೆದಾರರಿಗೆ ಹಂಚಲು ಸಿಐಡಿ ನಿರ್ಧರಿಸಿದೆ. ಸದ್ಯ ರಿಕವರಿ ಮಾಡಲಾಗುವ ಹಣವನ್ನು ‘ಬಡ್ಸ್’ (BUDS) ಕಾಯ್ದೆ ಮುಖ್ಯಸ್ಥರಾದ ಆದಿತ್ಯ ಆಮ್ಲಾನ್ ಬಿಸ್ವಾಸ್ ಅವರಿಗೆ ಹಸ್ತಾಂತರಿಸಲಾಗುವುದು. ತದನಂತರ ಅವರು ಕಾನೂನು ಪ್ರಕ್ರಿಯೆಗಳ ಮೂಲಕ ಸಾರ್ವಜನಿಕರಿಗೆ ಹಣವನ್ನು ವಾಪಸ್ ಮಾಡಲಿದ್ದಾರೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.


