Uncategorized

ಅಸುಂಡಿ ಗ್ರಾಮದ MSIL ಮದ್ಯದ ಮಳಿಗೆ ಸ್ಥಳಾಂತರಕ್ಕೆ ಆಗ್ರಹ: ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರಿಂದ ಮನವಿ

ಅಸುಂಡಿ ಗ್ರಾಮದ MSIL ಮದ್ಯದ ಮಳಿಗೆ ಸ್ಥಳಾಂತರಕ್ಕೆ ಆಗ್ರಹ: ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರಿಂದ ಮನವಿ
* ಸವದತ್ತಿ ತಾಲೂಕಿನ ಅಸುಂಡಿ ಗ್ರಾಮಸ್ಥರ ಆಕ್ರೋಶ.
* ಮುಖ್ಯ ರಸ್ತೆಯ ಎಂ ಎಸ್ ಐ ಎಲ್ ಮಳಿಗೆಗೆ ವಿರೋಧ.
* ವಿದ್ಯಾರ್ಥಿನಿಯರು, ಮಹಿಳೆಯರಿಗೆ ಮದ್ಯಪಾನಿಗಳಿಂದ ಕಿರುಕುಳ.
* ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರಿಂದ ಶೀಘ್ರ ಸ್ಥಳಾಂತರಕ್ಕೆ ಮನವಿ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದಲ್ಲಿರುವ MSIL ಮದ್ಯದ ಮಳಿಗೆಯಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದ್ದು, ಅದನ್ನು ತಕ್ಷಣವೇ ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಿದ್ದಾರೆ. ಮದ್ಯಪಾನಿಗಳ ಕಿರುಕುಳದಿಂದ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಹೈರಾಣಾಗಿದ್ದು, ಜಿಲ್ಲಾಡಳಿತದ ತುರ್ತು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಸವದತ್ತಿ ತಾಲೂಕಿನ ಅಸುಂಡಿ ಹಾಗೂ ಕರಕಟ್ಟಿ ಗ್ರಾಮಗಳ ಮಧ್ಯದ ಮುಖ್ಯ ರಸ್ತೆಯಲ್ಲಿರುವ ಎಂ.ಎಸ್.ಐ.ಎಲ್ (MSIL) ಮದ್ಯ ಮಾರಾಟ ಮಳಿಗೆಯಿಂದಾಗಿ ಸ್ಥಳೀಯ ಸಾರ್ವಜನಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿನಿತ್ಯ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಮಳಿಗೆಯ ಪಕ್ಕದಲ್ಲೇ ಶ್ರೀ ಸದ್ಗುರು ಆತ್ಮಾನಂದ ಆಶ್ರಮ ಹಾಗೂ ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನಗಳಿದ್ದು, ಭಕ್ತರ ಮತ್ತು ನಾಗರಿಕರ ಓಡಾಟ ನಿರಂತರವಾಗಿರುತ್ತದೆ. ಆದರೆ, ಮದ್ಯದ ಅಮಲಿನಲ್ಲಿರುವ ಕೆಲ ಕಿಡಿಗೇಡಿಗಳು ಈ ರಸ್ತೆಯಲ್ಲಿ ಸಂಚರಿಸುವ ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳೆಯರಿಗೆ ಅಪಹಾಸ್ಯ ಮಾಡುವುದು ಮತ್ತು ಕಿರುಕುಳ ನೀಡುವುದನ್ನು ಹವ್ಯಾಸವಾಗಿಸಿಕೊಂಡಿದ್ದಾರೆ. ಇದರಿಂದಾಗಿ ಗ್ರಾಮದ ಸಾರ್ವಜನಿಕ ನೆಮ್ಮದಿ ಸಂಪೂರ್ಣ ಹದಗೆಟ್ಟಿದ್ದು, ಮಳಿಗೆಯನ್ನು ತಕ್ಷಣವೇ ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಅಸುಂಡಿ ಗ್ರಾಮದ ಸಮಸ್ತ ನಾಗರಿಕರು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಹಕ್ಕೊತ್ತಾಯ ಮಂಡಿಸಿದರು.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಗ್ರಾಮಸ್ಥ ಗಂಗಪ್ಪ ಜ್ಞಾನಪ್ಪ ಈನಾಮತಿ ಅವರು, ಮದ್ಯದ ಮಳಿಗೆಯಿಂದಾಗಿ ರಸ್ತೆಯಲ್ಲಿ ವಾಹನ ಹಾಗೂ ಜನದಟ್ಟಣೆ ಹೆಚ್ಚಾಗುತ್ತಿದ್ದು, ಮಹಿಳೆಯರಿಗೆ ಮುಜುಗರ ತರುವುದರ ಜೊತೆಗೆ ಸಣ್ಣ-ಪುಟ್ಟ ಅಪಘಾತಗಳಿಗೂ ಕಾರಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಗಂಭೀರ ಸಮಸ್ಯೆಯ ಕುರಿತು ಈಗಾಗಲೇ ತಾಲೂಕು ಅಧಿಕಾರಿಗಳಿಗೆ ಹಾಗೂ ಅಬಕಾರಿ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ಈ ಉದಾಸೀನತೆಯಿಂದ ಬೇಸತ್ತು, ಇಂದು ಗ್ರಾಮದ ಹಿರಿಯರು ಮತ್ತು ಮಹಿಳೆಯರೆಲ್ಲರೂ ಒಟ್ಟಾಗಿ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಹಾಗೂ ಜಿಲ್ಲಾಧಿಕಾರಿಗಳು ಈ ವಿಷಯವನ್ನು ಅತ್ಯಂತ ಜರೂರಾಗಿ ಪರಿಗಣಿಸಿ, ಮಳಿಗೆಯನ್ನು ಶೀಘ್ರವಾಗಿ ಸ್ಥಳಾಂತರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರು ಹಾಗೂ ಅಪಾರ ಸಂಖ್ಯೆಯ ಮಹಿಳೆಯರು ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *

Back to top button