Uncategorized
ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಷಡ್ಯಂತ್ರ: ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ, ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಷಡ್ಯಂತ್ರ: ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ, ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ
ಮೈಸೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸಿ, ರಾಜಕೀಯ ಷಡ್ಯಂತ್ರ ರೂಪಿಸುತ್ತಿರುವ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಆಗ್ರಹಿಸಿ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ಸಂಘಟನೆಯ ನೇತೃತ್ವದಲ್ಲಿ ನಗರದ ಪುರಭವನದ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಜಮಾಯಿಸಿದ ನೂರಾರು ಕಾರ್ಯಕರ್ತರು ಮತ್ತು ಬೆಂಬಲಿಗರು, ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಅವರು 37 ಶಾಸಕರಿಂದ ಸಹಿ ಸಂಗ್ರಹಿಸುತ್ತಿದ್ದಾರೆ ಎಂಬ ನಕಲಿ ಪೋಸ್ಟರ್ ಹಾಗೂ ಸುಳ್ಳು ಸುದ್ದಿಯೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಹರಿಬಿಡಲಾಗಿತ್ತು. ಈ ಮೂಲಕ ಮುಖ್ಯಮಂತ್ರಿ ಹಾಗೂ ಸಚಿವರ ನಡುವೆ ರಾಜಕೀಯ ಒಡಕು ಮೂಡಿಸಲು ಪಟ್ಟಭದ್ರ ಹಿತಾಸಕ್ತಿಗಳು ಡಿಜಿಟಲ್ ರೂಪದಲ್ಲಿ ಕುತಂತ್ರ ನಡೆಸಿವೆ ಎಂದು ಪ್ರತಿಭಟನಾಕಾರರು ಗಂಭೀರವಾಗಿ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಹಿಂದುಳಿದ ಮತ್ತು ದಲಿತ (ಅಹಿಂದ) ನಾಯಕರ ಏಳಿಗೆಯನ್ನು ಸಹಿಸದ ಕೆಲವು ರಾಜಕೀಯ ಶಕ್ತಿಗಳು ಸತೀಶ್ ಜಾರಕಿಹೊಳಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಈ ರೀತಿ ಸೈಬರ್ ಷಡ್ಯಂತ್ರ ರೂಪಿಸುತ್ತಿವೆ ಎಂದು ಸಂಘಟನೆಯ ಪ್ರಮುಖರು ದೂರಿದ್ದಾರೆ.
ಸಚಿವರ ಹೆಸರಿನಲ್ಲಿ ನಕಲಿ ಸಹಿ ಸಂಗ್ರಹದ ವದಂತಿ ಸೃಷ್ಟಿಸಿದ ಕಿಡಿಗೇಡಿಗಳನ್ನು ಸೈಬರ್ ಕ್ರೈಂ ಪೊಲೀಸರು ತಕ್ಷಣವೇ ಪತ್ತೆ ಹಚ್ಚಿ ಜೈಲಿಗಟ್ಟಬೇಕು. ಸಮಾಜದಲ್ಲಿ ಗೊಂದಲ ಮತ್ತು ರಾಜಕೀಯ ಅಸ್ಥಿರತೆ ಮೂಡಿಸುತ್ತಿರುವ ನಕಲಿ ಫೇಸ್‌ಬುಕ್ ಪೇಜ್‌ಗಳು ಹಾಗೂ ಅದರ ಆಡ್ಮಿನ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಈ ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸ್ವತಃ ಸಚಿವ ಸತೀಶ್ ಜಾರಕಿಹೊಳಿ ಅವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು, “ನಾನು ಯಾರ ವಿರುದ್ಧವೂ ಸಹಿ ಸಂಗ್ರಹ ನಡೆಸಿಲ್ಲ.
ಸಿಎಂ ಸಿದ್ದರಾಮಯ್ಯ ಮತ್ತು ನಮ್ಮ ನಡುವೆ ಉತ್ತಮ ಬಾಂಧವ್ಯವಿದೆ. ಇವೆಲ್ಲವೂ ಐಟಿ ಸೆಲ್ ಸೃಷ್ಟಿಸಿರುವ ಶುದ್ಧ ಸುಳ್ಳುಗಳು” ಎಂದು ವದಂತಿಗಳನ್ನು ತಳ್ಳಿಹಾಕಿದ್ದಾರೆ. ಅಲ್ಲದೆ, ಸುಳ್ಳು ಪೋಸ್ಟ್ ಪ್ರಕಟಿಸಿದ ‘ಕರುನಾಡ ಕುರುಬಗೌಡ್ರು’ ಹಾಗೂ ‘ಬಂಡಾಯ ಧ್ವನಿ’ ಎಂಬ ಫೇಸ್‌ಬುಕ್ ಪುಟಗಳ ವಿರುದ್ಧ ಬೆಳಗಾವಿಯ ಸೈಬರ್ ಕ್ರೈಂ (CEN) ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎಫ್‌ಐಆರ್ (FIR) ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಯಾಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ



