Uncategorized
ಎರಡು ಕೋಟಿ ರೂ. ವಿಮೆ ಹಣಕ್ಕಾಗಿ ಮಾಜಿ ಸೈನಿಕನನ್ನು ಕೊಲೆ ಮಾಡಲಾಗಿದೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೃತನ ಪತ್ನಿಯ ಪ್ರಿಯಕರನಿಂದಲೇ ಸ್ಪೋಟಕ ಹೇಳಿಕೆ

ಚಂದುಳ್ಳಿ ಚೆಲುವಿ ಕುತಂತ್ರಕ್ಕೆ ಬಲಿಯಾದ ಮಾಜಿ ಸೈನಿಕ ; 2 ಕೋಟಿ ರೂಪಾಯಿ ವಿಮಾ ಹಣಕ್ಕೆ ಕೊಲೆ
ಬೆಳಗಾವಿ:ಎರಡು ಕೋಟಿ ರೂ. ವಿಮೆ ಹಣಕ್ಕಾಗಿ ಮಾಜಿ ಸೈನಿಕನನ್ನು ಕೊಲೆ ಮಾಡಲಾಗಿದೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೃತನ ಪತ್ನಿಯ ಪ್ರಿಯಕರನಿಂದಲೇ ಸ್ಪೋಟಕ ಹೇಳಿಕೆ ಹೊರಬಿದ್ದಿದೆ.
ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದ ಮಾಜಿ ಸೈನಿಕ ಸಂದೀಪ್ ಮಾಂಜರಿ ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಪ್ರಿಯಕರ ಪುಂಡಲೀಕ ಡೊಂಬರ್ ಬಿಡುಗಡೆ ಮಾಡಿದ ಸೆಲ್ಫಿ ವಿಡಿಯೋ ಸಂಚಲನ ಮೂಡಿಸಿದೆ.
ವಿಡಿಯೋದಲ್ಲಿ ಮಾತನಾಡಿರುವ ಪುಂಡಲೀಕ ಡೊಂಬರ್, “ಘೋಡಗೇರಿಯಲ್ಲಿ ನಾನು ಸಣ್ಣ ಎಗ್ ರೈಸ್ ಅಂಗಡಿ ನಡೆಸುತ್ತಿದ್ದೆ. ಅಲ್ಲಿಗೆ ಸಂದೀಪ್ ಬರುತ್ತಿದ್ದ. ನಿವೃತ್ತಿಯಾದ ಬಳಿಕ ಖಾಲಿ ಕುಳಿತುಕೊಳ್ಳುವುದಕ್ಕಿಂತ ಟೀ ಅಂಗಡಿ ಆರಂಭಿಸಿದ ಆತ, ಆಳು ಸಿಗದ ಕಾರಣ ನನ್ನ ಶಾಪ್ ಬಂದ್ ಮಾಡಿಸಿ ತನ್ನ ಅಂಗಡಿಗೆ ಕರೆದುಕೊಂಡು ಹೋಗಿದ್ದ ಎಂದಿದ್ದಾನೆ. ಬಳಿಕ ಸಂದೀಪ್ ಪತ್ನಿ ಸುಮಾ ಪರಿಚಯವಾಗಿ, ಇಬ್ಬರ ನಡುವೆ ಸ್ನೇಹ ಬೆಳೆದು ನಂತರ ಸಂಬಂಧವೂ ಬೆಳೆದಿತ್ತು” ಎಂದು ಹೇಳಿದ್ದಾನೆ.
ಇನ್ನೂ ಗಂಭೀರ ಆರೋಪ ಮಾಡಿರುವ ಆತ, “ಮನೆಯಲ್ಲಿ ಬಾಕ್ಸ್ ಗಟ್ಟಲೆ ಮದ್ಯ ಹಾಗೂ ನಿದ್ದೆ ಮಾತ್ರೆ ಇಟ್ಟುಕೊಂಡು ಸುಮಾ ಸಂದೀಪ್‌ಗೆ ಕುಡಿಸುತ್ತಿದ್ದಳು. ಯಾಕೆ ಹೀಗೆ ಮಾಡುತ್ತಿದ್ದೀಯೆ ಎಂದು ಕೇಳಿದರೆ, ‘ಗಂಡ ಸತ್ತರೂ ಸಾಯಲಿ’ ಎಂದು ಹೇಳುತ್ತಿದ್ದಳು” ಎಂದು ಆರೋಪಿಸಿದ್ದಾನೆ.
ಹುಕ್ಕೇರಿ ಜಾತ್ರೆಯಿಂದ ವಾಪಸ್ ಬರುತ್ತಿದ್ದ ವೇಳೆ ಸಂದೀಪ್ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ. “ಆಸ್ಪತ್ರೆಯಲ್ಲಿ ಇದ್ದಾಗ ಸುಮಾ ಕರೆ ಮಾಡಿ ಹುಳುಗಳಿಗೆ ಹೊಡೆಯುವ ವಿಷದ ಔಷಧ ತಂದುಕೊಡು ಎಂದಳು. ನಾನು ಔಷಧ ತಂದುಕೊಟ್ಟ ಮಾರನೇ ದಿನವೇ ಸಂದೀಪ್ ಮೃತಪಟ್ಟ. ಇದರಿಂದ ಸಾವಿನ ಬಗ್ಗೆ ನನಗೆ ಅನುಮಾನ ಮೂಡಿದೆ” ಎಂದು ಪುಂಡಲೀಕ ವಿಡಿಯೋದಲ್ಲಿ ಹೇಳಿದ್ದಾನೆ.
ಇದಲ್ಲದೆ, “ಸಂದೀಪ್ ಮೇಲೆ ಎರಡು ಕೋಟಿ ರೂ. ಇನ್ಶುರೆನ್ಸ್ ಮಾಡಿಸಿದ್ದೇನೆ. ಹಣ ಬಂದ ಮೇಲೆ ನಿನ್ನ ಎರಡು ಮಕ್ಕಳು, ನನ್ನ ಎರಡು ಮಕ್ಕಳು ಸೇರಿ ಬೆಳಗಾವಿಗೆ ಹೋಗಿ ನೆಲೆಸೋಣ ಎಂದು ಸುಮಾ ಹೇಳುತ್ತಿದ್ದಳು” ಎಂಬ ಆರೋಪವೂ ಮಾಡಿದ್ದಾನೆ.
“ಸಂದೀಪ್ ಸತ್ತ ನಂತರ ನಾನು ಕೊಟ್ಟ ಔಷಧ ಸೇರಿದಂತೆ ಬೇರೆ ವಸ್ತುಗಳನ್ನು ಎಲ್ಲಿಯಾದರೂ ಚೆಲ್ಲಿಬಿಡು ಎಂದು ಸುಮಾ ಹೇಳಿದ್ದಳು. ಒಬ್ಬ ಮಾಜಿ ಸೈನಿಕನ ಸಾವಿನ ಪ್ರಕರಣ ಇದಾಗಿದ್ದು, ಸಮಗ್ರ ಮರು ತನಿಖೆ ನಡೆಯಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಒಂದು ರೂಪಾಯಿ ವಿಮೆ ಹಣವೂ ಬಿಡುಗಡೆ ಆಗಬಾರದು” ಎಂದು ಪುಂಡಲೀಕ ಒತ್ತಾಯಿಸಿದ್ದಾನೆ.
“ನಾನು ಹೇಳುತ್ತಿರುವುದರಲ್ಲಿ ಸುಳ್ಳಿದ್ದರೆ ಜೈಲಿಗೆ ಹೋಗಲು ಸಿದ್ಧನಿದ್ದೇನೆ” ಎಂದು ಆತ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.
ಇನ್ನೊಂದೆಡೆ, ಪ್ರಕರಣದ ಗಂಭೀರತೆಯನ್ನು ಮನಗಂಡ ಪೊಲೀಸರು ನಿನ್ನೆ ಮೃತ ಸಂದೀಪ್ ಮಾಂಜರಿ ಅವರ ಶವವನ್ನು ಹೊರತೆಗೆದು ಮರು ಪರಿಶೀಲನೆ ನಡೆಸಿದ್ದಾರೆ. ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ನಡೆದ ಈ ಘಟನೆ ಇದೀಗ ಜಿಲ್ಲಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.



