Uncategorized

ಪೊಲೀಸರ ಕಾರ್ಯಾಚರಣೆ: 13 ವರ್ಷಗಳ ಬಳಿಕ ಆರೋಪಿಯ ಬಂಧನ

ಹಳಿಯಾಳ ಪೊಲೀಸರ ಕಾರ್ಯಾಚರಣೆ: 13 ವರ್ಷಗಳ ಬಳಿಕ ಆರೋಪಿಯ ಬಂಧನ
ಹಳಿಯಾಳ, ಜೂನ್ 15: 2014ರಲ್ಲಿ ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಲಾರಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ 13 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಮಧು ಯುವರಾಜ ಐಹೊಳೆ (ಕುಡಚಿ, ಬೆಳಗಾವಿ) ಅವರನ್ನು ಹಳಿಯಾಳ ಪೊಲೀಸರು ಬಂಧಿಸಿದ್ದಾರೆ.
2014ರಲ್ಲಿ ನಡೆದ ಎರಡು ಲಾರಿ ಕಳ್ಳತನ ಪ್ರಕರಣಗಳ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಗುನ್ನಾ ಸಂಖ್ಯೆ 15/2014 ಹಾಗೂ 143/2014 ಅಡಿಯಲ್ಲಿ ಐಪಿಸಿ ಕಲಂ 379, 201 ಹಾಗೂ 34ರಡಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿ, ಕಳುವಾದ ಸ್ವತ್ತನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಈ ಪ್ರಕರಣಗಳು ಸಿಸಿ ಸಂಖ್ಯೆ 305/2015 ಹಾಗೂ 334/2015ರಂತೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ.
ಪ್ರಕರಣದ ಎ-7 ಆರೋಪಿಯಾಗಿರುವ ಮಧು ಯುವರಾಜ ಐಹೊಳೆ 2014ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೇ ಪರಾರಿಯಾಗಿದ್ದ. 2026ರಲ್ಲಿ ಸ್ಪ್ಲಿಟ್-ಅಪ್ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದು, ಸಿಸಿ ಸಂಖ್ಯೆ 54/2026 ಹಾಗೂ 55/2026ರಡಿ ಆರೋಪಿಯ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಲಾಗಿತ್ತು.
ಆರೋಪಿಯ ಪತ್ತೆಗಾಗಿ ಹಳಿಯಾಳ ಪೊಲೀಸ್ ಠಾಣೆಯಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ತಾಂತ್ರಿಕ ಮಾಹಿತಿ ಹಾಗೂ ಖಚಿತ ಸುಳಿವಿನ ಆಧಾರದ ಮೇಲೆ ಆರೋಪಿಯು ತೆಲಂಗಾಣ ರಾಜ್ಯದಲ್ಲಿರುವುದನ್ನು ಪತ್ತೆಹಚ್ಚಿದ ಪೊಲೀಸರು, ಜೂನ್ 13ರಂದು ಹೈದರಾಬಾದ್‌ನ ರಂಗಾರೆಡ್ಡಿ ಜಿಲ್ಲೆಯ ಬಂದ್ ಮೈಲಾರ್ ಗ್ರಾಮದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಬಳಿಕ ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಬಂಧಿತ ಆರೋಪಿ ಅಂತರ ಜಿಲ್ಲಾ ಅಪರಾಧಿಯಾಗಿದ್ದು, ಬೆಳಗಾವಿ ಜಿಲ್ಲೆಯ ನಂದಗಡ ಪೊಲೀಸ್ ಠಾಣೆಯಲ್ಲಿ ಒಂದು, ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಒಂದು, ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಒಂದು ಹಾಗೂ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಇನ್ನು ಕೆಲ ಪೊಲೀಸ್ ಠಾಣೆಗಳಲ್ಲಿ ಆರೋಪಿಯ ವಿರುದ್ಧ ಎಲ್‌ಪಿಸಿ ಪ್ರಕರಣಗಳಿರುವುದು ತಿಳಿದುಬಂದಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. (ಐಪಿಎಸ್), ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ದಾಂಡೇಲಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಶಿವಾನಂದ ಮದರಕಂಡಿ ಹಾಗೂ ಹಳಿಯಾಳ ವೃತ್ತ ನಿರೀಕ್ಷಕ ಜಯಪಾಲ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐ ಬಸವರಾಜ ಮಬನೂರ ಮತ್ತು ಪಿಎಸ್‌ಐ ಶ್ರೀಕೃಷ್ಣ ಅರಕೇರಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು.
ಎಎಸ್‌ಐ ವೆಂಕಟೇಶ್ ತೆಗ್ಗಿನ, ಸಿಎಚ್‌ಸಿ ಬಸವರಾಜ ಹಗರಿ, ಸಿಪಿಸಿ ಶ್ರೀಶೈಲ್ ಜಿ.ಎಂ., ಲಕ್ಷಣ ಪೂಜಾರಿ, ವಿನೋದ್ ಜಿ.ಬಿ. ಹಾಗೂ ರಾಘವೇಂದ್ರ ಆರೋಪಿಯನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪ್ರಕರಣ ಭೇದಿಸಿದ ತಂಡದ ಕಾರ್ಯವನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಅಭಿನಂದಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button