Uncategorized
ವಿವಾಹಿತ ಮಹಿಳೆಯ ಬೆತ್ತಲೆ ವಿಡಿಯೋ ಚಿತ್ರೀಕರಣ,

ವಿವಾಹಿತ ಮಹಿಳೆಯ ಬೆತ್ತಲೆ ವಿಡಿಯೋ ಚಿತ್ರೀಕರಣ,
ಬ್ಲ್ಯಾಕ್ ಮೇಲ್ ಮಾಡಿ ನಿರಂತರ ಅತ್ಯಾಚಾರ ಆರೋಪ
ಚಿಕ್ಕಬಳ್ಳಾಪುರ: ವಿವಾಹಿತ ಮಹಿಳೆಯೊಬ್ಬರಿಗೆ ಮತ್ತಿನ ಔಷಧಿ ನೀಡಿ ಅತ್ಯಾಚಾರ ಎಸಗಿ, ಬಳಿಕ ಖಾಸಗಿ ವಿಡಿಯೋಗಳನ್ನು ಬಳಸಿಕೊಂಡು ಒಂದೂವರೆ ವರ್ಷಗಳ ಕಾಲ ಬ್ಲ್ಯಾಕ್ಮೇಲ್ ಮಾಡಿದ ಆರೋಪದ ಪ್ರಕರಣ ಶಿಡ್ಲಘಟ್ಟದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಮಂಡ್ಯ ಮೂಲದ ರಮೇಶ್ ಎಂಬಾತನ ವಿರುದ್ಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಂತ್ರಸ್ತೆ (ಹೆಸರು ಬದಲಾಯಿಸಲಾಗಿದೆ) ನೀಡಿರುವ ದೂರಿನ ಪ್ರಕಾರ, ಬೆಂಗಳೂರಿನಲ್ಲಿ ವಾಸವಾಗಿದ್ದ ತಮ್ಮ ಚಿಕ್ಕಮ್ಮನ ಮನೆಗೆ ಆಗಾಗ್ಗೆ ಹೋಗಿ ಬರುತ್ತಿದ್ದ ವೇಳೆ ಆರೋಪಿ ರಮೇಶ್ ಪರಿಚಯವಾಗಿದ್ದ. ಒಂದು ದಿನ ನಂಬಿಕೆ ಮೂಡಿಸಿ ತನ್ನ ಮನೆಗೆ ಕರೆದೊಯ್ದು ಜ್ಯೂಸ್ನಲ್ಲಿ ಮತ್ತಿನ ಔಷಧಿ ಬೆರೆಸಿ ಕುಡಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಅಲ್ಲದೆ, ಘಟನೆ ವೇಳೆ ಖಾಸಗಿ ವಿಡಿಯೋ ಚಿತ್ರೀಕರಿಸಿಕೊಂಡು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಹಾಗೂ ಕುಟುಂಬಕ್ಕೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಭಯವನ್ನೇ ಬಳಸಿಕೊಂಡು ಆರೋಪಿ ಮಹಿಳೆಯನ್ನು ನಿರಂತರವಾಗಿ ಶೋಷಣೆ ಮಾಡಿದ್ದು, ಚಿನ್ನಾಭರಣ ಹಾಗೂ ಲಕ್ಷಾಂತರ ರೂಪಾಯಿ ಹಣವನ್ನೂ ಪಡೆದು ವಂಚನೆ ನಡೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಾನಹಾನಿಯ ಭಯದಿಂದ ಇಷ್ಟು ದಿನ ಮೌನವಾಗಿದ್ದ ಮಹಿಳೆ, ಪತಿಯ ಬೆಂಬಲದೊಂದಿಗೆ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಆರೋಪಿಯ ಪತ್ತೆ ಮತ್ತು ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.



