Uncategorized

ಕಾಗವಾಡ ತಾಲೂಕಿನಲ್ಲಿ ಪಠ್ಯಪುಸ್ತಕ ವಿತರಣೆ ಚುರುಕು: 21,563 ವಿದ್ಯಾರ್ಥಿಗಳಿಗೆ ಸೌಲಭ್ಯ

* ಕಾಗವಾಡದಲ್ಲಿ ಪಠ್ಯಪುಸ್ತಕ ವಿತರಣೆ ತೀವ್ರ ವೇಗ
* ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಸಡಗರದ ವಿತರಣೆ
* ಈ ವರ್ಷ ಪಠ್ಯಕ್ರಮದಲ್ಲಿ ಅಮೂಲಾಗ್ರ ಬದಲಾವಣೆ
* ವಿದ್ಯಾರ್ಥಿಗಳ ಶೈಕ್ಷಣಿಕ ಮೌಲ್ಯವರ್ಧನೆಗೆ ವಿಶೇಷ ಒತ್ತು
ರಾಜ್ಯದ ಶಿಕ್ಷಣ ಇಲಾಖೆಯು ಈ ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲು ವಿಶೇಷ ಯೋಜನೆಗಳನ್ನು ಹಮ್ಮಿಕೊಂಡಿದೆ. ಶಾಲೆಯ ಒಂದನೇ ತರಗತಿಯಿಂದ 10ನೇ ತರಗತಿವರೆಗೆ ಓದುವ ಎಲ್ಲಾ ವಿದ್ಯಾರ್ಥಿಗಳಿಗೆ ಹೊಸ ಪಠ್ಯಪುಸ್ತಕಗಳನ್ನು ರೂಪಿಸಲಾಗಿದ್ದು, ಅವುಗಳ ವಿತರಣಾ ಕಾರ್ಯ ಕಾಗವಾಡ ತಾಲೂಕಿನಲ್ಲಿ ಚುರುಕುಗೊಂಡಿದೆ.
ಕಾಗವಾಡ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ. ಎನ್. ಗಾಣಿಗೇರ್ ಈ ಕುರಿತು ಮಾಹಿತಿ ನೀಡಿ, “ರಾಜ್ಯ ಸರ್ಕಾರವು ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಮೌಲ್ಯವನ್ನು ಹೆಚ್ಚಿಸಲು ವಿಶೇಷ ಪ್ರಯತ್ನ ನಡೆಸುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪುಸ್ತಕಗಳಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಲಾಗಿದೆ,” ಎಂದರು.
“ಅದರಲ್ಲೂ ಮೌಲ್ಯಶಿಕ್ಷಣ ಆವಿಷ್ಕಾರ, ಕುತೂಹಲ, ಮುದಂಗ, ಸಂತೂರ್, ಗಣಿತ ವಿಷಯದಲ್ಲಿ ಗಣಿತ ಮೇಳ, ಜಾಯ್‌ಫುಲ್ ಇಂಗ್ಲಿಷ್ ವಿಷಯದಲ್ಲಿ ಪೂರ್ವಾ ಎಂಬ ಪುಸ್ತಕಗಳ ಹೆಸರನ್ನು ಬದಲಾವಣೆ ಮಾಡಲಾಗಿದೆ. 10ನೇ ತರಗತಿ ವಿದ್ಯಾರ್ಥಿಗಳಿಗೆ ದಿನನಿತ್ಯದ ದಿನಾಚರಣೆಗಳನ್ನು ಸಂಗ್ರಹಿಸಲು ಡೈರಿ ವಿತರಣೆ ಹಮ್ಮಿಕೊಳ್ಳಲಾಗಿದೆ. ಮರಾಠಿ ಹಾಗೂ ಉರ್ದು ಶಾಲೆಯ ವಿದ್ಯಾರ್ಥಿಗಳಿಗೆ ದ್ವಿಭಾಷಾ ಪುಸ್ತಕಗಳ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲಾ ಪುಸ್ತಕಗಳು ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಲಯಕ್ಕೆ ತಲುಪಿದ್ದು, ಶಾಲಾ ಪ್ರಾರಂಭೋತ್ಸವದ ದಿನದಿಂದಲೇ ಪುಸ್ತಕಗಳ ವಿತರಣೆಯನ್ನು ಅವಿರತವಾಗಿ ನಡೆಸಲಾಗುತ್ತಿದೆ,” ಎಂದು ಅವರು ವಿವರಿಸಿದರು.
ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ವಲಯದ ಶಿಕ್ಷಣ ಸಂಯೋಜಕ ಭರತ್ ಬಿಲವಡೆ ಮಾಹಿತಿ ನೀಡಿ, “ರಾಜ್ಯದ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲೆಯ ಶಿಕ್ಷಣ ಇಲಾಖೆಯ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಎನ್. ಮದಮಾವಿ ಸೇರಿದಂತೆ ಎಲ್ಲಾ ಗಣ್ಯರು ಈ ವರ್ಷದ ಶೈಕ್ಷಣಿಕ ಮೌಲ್ಯಮಾಪನ ಹೆಚ್ಚಿಸಲು ಮತ್ತು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ,” ಎಂದರು.
“ಕಾಗವಾಡ ತಾಲೂಕಿನ 165 ಶಾಲೆಗಳಲ್ಲಿ 11,216 ವಿದ್ಯಾರ್ಥಿಗಳು ಹಾಗೂ 10,347 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 21,563 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ 471 ಉರ್ದು ಭಾಷೆಯ ಹಾಗೂ 536 ಮರಾಠಿ ಭಾಷೆಯ ವಿದ್ಯಾರ್ಥಿಗಳಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ವಿಷಯವಾರು ಪುಸ್ತಕಗಳನ್ನು ವಿತರಿಸಲಾಗುತ್ತಿದ್ದು, ಬರುವ ನಾಲ್ಕು ದಿನಗಳಲ್ಲಿ ಎಲ್ಲಾ ಶಾಲೆಗಳಲ್ಲಿ ಸಮರ್ಪಕವಾಗಿ ಪುಸ್ತಕ ವಿತರಣೆಯಾಗಲಿದೆ. ಪುಸ್ತಕ ಸಾಗಾಣಿಕೆಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೆ 4 ರೂಪಾಯಿಯಂತೆ ವೆಚ್ಚವಾಗುವ ಹಣವನ್ನು ಆಯಾ ಶಾಲೆಯ ಮುಖ್ಯೋಪಾಧ್ಯಾಯರ ಖಾತೆಗೆ ಜಮಾ ಮಾಡಲಾಗುವುದು,” ಎಂದು ಶಿಕ್ಷಣ ಸಂಯೋಜಕರು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಎಸ್. ಆರ್. ಮಾಳಿ, ರಮೇಶ್ ದುರ್ಗಾಡೆ ಸೇರಿದಂತೆ ಮರಾಠಿ ಹಾಗೂ ಉರ್ದು ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *

Back to top button