Uncategorized

ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದಲ್ಲಿ ಎಂಎಸ್ಐಎಲ್ ಮದ್ಯದ ಅಂಗಡಿ ಬಂದ್ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಬೀದಿಗಿಳಿದು ಬೃಹತ್ ಪ್ರತಿಭಟನೆ

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದಲ್ಲಿ ಎಂಎಸ್ಐಎಲ್ ಮದ್ಯದ ಅಂಗಡಿ ಬಂದ್ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಮದ್ಯದ ಚಟದಿಂದಾಗಿ ಇಡೀ ಗ್ರಾಮದ ಯುವ ಪೀಳಿಗೆ ಹಾದಿ ತಪ್ಪುತ್ತಿದ್ದು, ಸಂಸಾರಗಳು ಬೀದಿಗೆ ಬರುತ್ತಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದಲ್ಲಿ ಎಂಎಸ್ಐಎಲ್ (MSIL) ಮದ್ಯದ ಅಂಗಡಿಯಿಂದಾಗಿ ಗ್ರಾಮದ ಶಾಂತಿ ಹಾಗೂ ಸ್ವಾಸ್ಥ್ಯ ಹಾಳಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು. ಗ್ರಾಮದ ಮುಖ್ಯ ರಸ್ತೆಯಿಂದ ಹೊರವಲಯದಲ್ಲಿರುವ ಎಂಎಸ್ಐಎಲ್ ಮದ್ಯದ ಅಂಗಡಿಯವರೆಗೆ ಪಾದಯಾತ್ರೆ ನಡೆಸಿದ ನೂರಾರು ಮಹಿಳೆಯರು ಮತ್ತು ಪುರುಷರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇತ್ತೀಚಿನ ದಿನಗಳಲ್ಲಿ ಗ್ರಾಮದ ಶಾಲಾ ಮಕ್ಕಳು ಹಾಗೂ ಯುವಕರು ಮದ್ಯದ ಚಟಕ್ಕೆ ದಾಸರಾಗುತ್ತಿದ್ದು, ಇಡೀ ಕುಟುಂಬಗಳು ಆರ್ಥಿಕವಾಗಿ ಕಂಗಾಲಾಗಿವೆ. “ದುಡಿದ ಹಣವನ್ನೆಲ್ಲಾ ಪುರುಷರು ಕುಡಿತಕ್ಕೆ ಖಾಲಿ ಮಾಡುತ್ತಿದ್ದರೆ, ನಾವು ಮನೆ ನಡೆಸುವುದು ಹೇಗೆ?” ಎಂದು ಮಹಿಳೆಯರು ಕಣ್ಣೀರು ಹಾಕುತ್ತಾ ತಮ್ಮ ಆಕ್ರೋಶ ಹೊರಹಾಕಿದರು. ಕೆಲ ದಿನಗಳ ಹಿಂದೆಯಷ್ಟೇ ಈ ಬಗ್ಗೆ ಅಬಕಾರಿ ಡಿಸಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ, ಗ್ರಾಮಸ್ಥರು ಇಂದು ಬೀದಿಗಿಳಿದು ಎಂಎಸ್ಐಎಲ್ ಮುಂಭಾಗ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಸವದತ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮದ್ಯದ ಅಂಗಡಿಯನ್ನು ಕೂಡಲೇ ಬಂದ್ ಮಾಡಬೇಕೆಂದು ಪಟ್ಟು ಹಿಡಿದಿದ್ದ ಪ್ರತಿಭಟನಾಕಾರರನ್ನು ಶಾಂತಗೊಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಗ್ರಾಮಸ್ಥರ ಆಕ್ರೋಶಕ್ಕೆ ಮಣಿದ ಅಧಿಕಾರಿಗಳು, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪರಿಸ್ಥಿತಿ ತಿಳಿಯಾಯಿತು. ಅಬಕಾರಿ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಸುಂಡಿ ಗ್ರಾಮಸ್ಥರು, ಒಂದು ವೇಳೆ ಶೀಘ್ರದಲ್ಲೇ ಅಂಗಡಿಯನ್ನು ಸ್ಥಳಾಂತರಿಸದಿದ್ದರೆ ಅಥವಾ ಬಂದ್ ಮಾಡದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button