Uncategorized
20 ದಿನದಲ್ಲಿ 70 ಲಕ್ಷ ದಂಡ ವಸೂಲಿ: ಕಮಿಷನ್‌ರೇಟ್ ವ್ಯಾಪ್ತಿಯಲ್ಲಿ 26,855 ಪ್ರಕರಣ ಇತ್ಯರ್ಥ

20 ದಿನದಲ್ಲಿ 70 ಲಕ್ಷ ದಂಡ ವಸೂಲಿ: ಕಮಿಷನ್‌ರೇಟ್ ವ್ಯಾಪ್ತಿಯಲ್ಲಿ 26,855 ಪ್ರಕರಣ ಇತ್ಯರ್ಥ
ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಪ್ರಕರಣಗಳನ್ನು ಇತ್ಯರ್ಥಗೊಳಿಸಲು, ಜೂನ್ 21ರಿಂದ ಜುಲೈ 10ರ ವರೆಗೆ ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡಕ್ಕೆ ಘೋಷಿಸಿದ್ದ ಶೇ.50ರ ವಿಶೇಷ ರಿಯಾಯಿತಿ ಯೋಜನೆಗೆ ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಈ ಅವಧಿಯಲ್ಲಿ 26,855 ಸಂಚಾರ ಪ್ರಕರಣ ಇತ್ಯರ್ಥಗೊಂಡಿದ್ದು, ಒಟ್ಟು 70,61,075 ದಂಡ ವಸೂಲಾಗಿದೆ.
..ಹುಬ್ಬಳ್ಳಿ ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಬೈಕ್ ಸವಾರನೊಬ್ಬ 69 ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಈ 36 ಸಾವಿರ ದಂಡ ವಿಧಿಸಲಾಗಿತ್ತು. ಸರ್ಕಾರದ ಶೇ. 50ರ ರಿಯಾಯಿತಿಯಿಂದ 18 ಸಾವಿರ ಪಾವತಿಸಿ ಎಲ್ಲ ಪ್ರಕರಣ ಇತ್ಯರ್ಥ ಪಡಿಸಿದ್ದಾನೆ. ಇದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಓರ್ವ ಸವಾರ ಒಂದೇ ಬಾರಿಗೆ ಇಷ್ಟೊಂದು ಪ್ರಕರಣಗಳ ದಂಡ ಪಾವತಿಸಿರುವುದು ಇದೇ ಮೊದಲು ಎಂಬುದು ವಿಶೇಷ.
ಇದಷ್ಟೇ ಅಲ್ಲದೆ, ಉತ್ತರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಕ್ರಮವಾಗಿ 60 ಹಾಗೂ 59 ಪ್ರಕರಣಗಳ ದಂಡ ಪಾವತಿಸಿದ್ದಾರೆ. ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೊಬ್ಬ ವಾಹನ ಸವಾರ 43 ಪ್ರಕರಣಗಳ ದಂಡ ಇತ್ಯರ್ಥಪಡಿಸಿರುವುದು ದಾಖಲಾಗಿದೆ. ಧಾರವಾಡ ಸಂಚಾರಿ ಪೊಲೀಸ್ ಠಾಣೆ 39, 36, 34, 29, 25, ಪೂರ್ವ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 39, 35 ಹಾಗೂ 32 ಪ್ರಕರಣಗಳ ದಂಡವನ್ನು ಒಂದೇ ಬಾರಿ ಪಾವತಿಸಿದ್ದಾರೆ.
2019ರಿಂದ ಈ ವರೆಗೆ ಒಟ್ಟು 6.50 ಲಕ್ಷಕ್ಕೂ ಅಧಿಕ ಪ್ರಕರಣ ದಾಖಲಾಗಿದ್ದು 20 ದಿನದಲ್ಲಿ 26,855 ಪ್ರಕರಣ ಇತ್ಯರ್ಥವಾಗಿವೆ. ಇನ್ನುಳಿದ 6.23 ಲಕ್ಷಕ್ಕೂ ಹೆಚ್ಚು ಪ್ರಕರಣಕ್ಕೆ ಸವಾರರು ಪೂರ್ಣ ಪ್ರಮಾಣದಲ್ಲಿ ದಂಡ ಪಾವತಿಸಬೇಕಿದೆ. ಬಾಕಿ ಉಳಿದಿರುವ ವಾಹನದ ಮಾಲಿಕರಿಗೆ ಜ್ಞಾಪನಾ ನೋಟಿಸ್, ನಂತರ ವಾರಂಟ್ ಹೊರಡಿಸಲು ಸಹ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.



