Uncategorized
ಹೋರಾಟಗಾರ ಅನ್ನಿಸಿಕೊಂಡಿದ್ದಾತನದ್ದು ಇದೆಂಥಾ ವಿಕೃತ..?!

ಸಹಾಯ ಮಾಡೋ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪವೊಂದು #ಕಲಬುರಗಿಯಲ್ಲಿ ಕೇಳಿಬಂದಿದೆ! ರಾಷ್ಟ್ರ ರಕ್ಷಣಾ ಪಡೆಯ ಜಿಲ್ಲಾಧ್ಯಕ್ಷ ಮಡಿವಾಳಪ್ಪ ಅಮರಾವತಿ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿ. ಕಾರಿನಲ್ಲಿ ಯುವತಿಯನ್ನು ಬಲವಂತವಾಗಿ ಕರೆದೊಯ್ದು ವಿಕೃತಿ ಮೆರೆದಿದ್ದಾನೆ ಅನ್ನೋ ಆರೋಪ ಕೇಳಿಬಂದಿದ್ದು, ಪೊಲೀಸರ ಎಂಟ್ರಿ ನೀಡುತ್ತಿದ್ದಂತೆ ಆರೋಪಿ ಎಸ್ಕೇಪ್ ಆಗಿದ್ದಾನೆ!
ಸಹಾಯ ಮಾಡ್ತೀನಿ ಅಂತ ಬಂದವನೇ ಕಾಮಂದನಾಗಿದ್ದ… ಕಷ್ಟದಲ್ಲಿದ್ದ ಯುವತಿಯ ನೆರವಿಗೆ ಬರೋ ರೀತಿ ನಟಿಸಿ, ಕಾರಿನಲ್ಲಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ! ಈ ಆಘಾತಕಾರಿ ಘಟನೆ ನಡೆದಿರೋದು ತೊಗರಿ ಕಣಜ ಕಲಬುರಗಿಯಲ್ಲಿ. ರಾಷ್ಟ್ರ ರಕ್ಷಣಾ ಪಡೆಯ ಜಿಲ್ಲಾಧ್ಯಕ್ಷ ಮಡಿವಾಳಪ್ಪ ಅಮರಾವತಿ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದೆ. ಕಷ್ಟದಲ್ಲಿದ್ದ ಯುವತಿಗೆ ಸಹಾಯ ಮಾಡೋದಾಗಿ ಪರಿಚಯ ಮಾಡಿಕೊಂಡಿದ್ದ ಮಡಿವಾಳಪ್ಪ, ಜುಲೈ 11ರಂದು ಆಕೆಯನ್ನು ಕಾರಿನಲ್ಲಿ ಬಲವಂತವಾಗಿ ಕರೆದೊಯ್ದು ಸಾರ್ವಜನಿಕ ರಸ್ತೆಯಲ್ಲೇ ಅಂಗಾಂಗ ಮುಟ್ಟಿ ವಿಕೃತಿ ಮೆರೆದಿದ್ದಾನೆ ಎನ್ನಲಾಗಿದೆ.
ಇನ್ನು ಕಾರಿನಲ್ಲಿ ಮಡಿವಾಳಪ್ಪ ನೀಡ್ತಿದ್ದ ಕಿರುಕುಳ ತಾಳಲಾರದೆ ಯುವತಿ ತಕ್ಷಣವೇ ತುರ್ತು ನೆರವು ಸಂಖ್ಯೆ 112ಕ್ಕೆ ಕರೆ ಮಾಡಿ ಪೊಲೀಸರ ಸಹಾಯ ಕೋರಿದ್ದಾಳೆ. ಯುವತಿಯ ಕರೆ ಬಂದ ತಕ್ಷಣ ಎಚ್ಚೆತ್ತ ಪೊಲೀಸರು ಸ್ಪಾಟ್‌ಗೆ ಧಾವಿಸಿದ್ದಾರೆ. ಆದರೆ ಪೊಲೀಸರ ವಾಹನ ಬರುವುದನ್ನು ಗಮನಿಸಿದ ಆರೋಪಿ ಮಡಿವಾಳಪ್ಪ, ಯುವತಿಯನ್ನು ಅಲ್ಲೇ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಸದ್ಯ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಕಲಬುರಗಿಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಮಡಿವಾಳಪ್ಪ ವಿರುದ್ಧ FIR ದಾಖಲಾಗಿದೆ.
ಇತ್ತ ಈ ಘಟನೆ ಬೆನ್ನಲ್ಲೇ ಮಡಿವಾಳಪ್ಪ ಪತ್ನಿ ಕೂಡ ತನ್ನ ಪತಿಯ ವಿರುದ್ಧವೇ ಸಿಡಿದೆದ್ದಿದ್ದಾಳೆ. “ಇನ್ನೂ ಎಷ್ಟು ಹೆಣ್ಣುಮಕ್ಕಳ ಜೀವ ಹಾಳು ಮಾಡ್ತೀಯಾ?” ಎಂದು ಆಕ್ರೋಶ ಹೊರಹಾಕಿದ್ದು, ಆಕೆಯೂ ಪತಿಯ ವಿರುದ್ಧ ದೂರು ನೀಡಲು ಮುಂದಾಗಿದ್ದಾಳೆ!
ಇತ್ತ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ಅಲ್ಲಗೆಳೆದಿರೋ ಆರೋಪಿ ಮಡಿವಾಳಪ್ಪ, “ಯುವತಿ ಕಷ್ಟದಲ್ಲಿದ್ದಳು.. ನಾನು ಫೋನ್ ಪೇ ಮೂಲಕ ಆಕೆಗೆ ಹಣದ ಸಹಾಯ ಮಾಡಿದ್ದೇನೆ ಹೊರತು ಯಾವುದೇ ಕಿರುಕುಳ ನೀಡಿಲ್ಲ” ಎಂದು ಸ್ಪಷ್ಟನೆ ನೀಡುತ್ತಿದ್ದಾನೆ.
ಸಹಾಯದ ನೆಪದಲ್ಲಿ ವಿಕೃತಿ ಮೆರೆದ ಆರೋಪಿ ಮಡಿವಾಳಪ್ಪ ನಿಜಕ್ಕೂ ದೌರ್ಜನ್ಯವೆಸಗಿದ್ದಾನಾ ಅಥವಾ ಇದು ಹಣಕಾಸಿನ ವಿಚಾರದಲ್ಲಿ ಉಂಟಾದ ಗೊಂದಲವೇ ಎಂಬ ಬಗ್ಗೆ ಬ್ರಹ್ಮಪುರ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಇದೀಗ ಹುಡುಗಿಯೂ ಇಲ್ಲ, ಹೆಂಡ್ತಿಯೂ ಇಲ್ಲ ಎನ್ನುವಂತಾಗಿದೆ ಈತನ ಸ್ಥಿತಿ.



