Uncategorized

ಕುಡಚಿ ಇಂದಿರಾ ಕ್ಯಾಂಟೀನ್‌ನಲ್ಲಿ ರೇಷನ್ ಅಕ್ಕಿ ಬಳಕೆ ಆರೋಪ? ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

ಕುಡಚಿ ಇಂದಿರಾ ಕ್ಯಾಂಟೀನ್‌ನಲ್ಲಿ ರೇಷನ್ ಅಕ್ಕಿ ಬಳಕೆ ಆರೋಪ? ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

ಸಂಜೀವ ಬ್ಯಾಕುಡೆ,
ಕುಡಚಿ:
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಸಾರ್ವಜನಿಕರಿಗೆ ಆಹಾರ ತಯಾರಿಸಲು ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಮೂಲಕ ವಿತರಿಸುವ ರೇಷನ್ ಅಕ್ಕಿಯನ್ನು ಬಳಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪರಿಶೀಲನೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇಂದಿರಾ ಕ್ಯಾಂಟೀನ್‌ನಲ್ಲಿ ಸ್ವಚ್ಛತೆ ಹಾಗೂ ಮೂಲಸೌಕರ್ಯಗಳ ನಿರ್ವಹಣೆ ಸಮರ್ಪಕವಾಗಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಕ್ಯಾಂಟೀನ್ ಆರಂಭವಾದಾಗಿನಿಂದಲೂ ನೀರಿನ ಫಿಲ್ಟರ್ ಸೇರಿದಂತೆ ಹಲವು ಅಡುಗೆ ಸಲಕರಣೆಗಳು ಬಳಕೆಯಾಗದೆ ಅಥವಾ ತುಕ್ಕು ಹಿಡಿದ ಸ್ಥಿತಿಯಲ್ಲಿವೆ ಎನ್ನಲಾಗುತ್ತಿದೆ. ಅಲ್ಲದೆ, ಪ್ಲೇಟ್‌ಗಳು ಹಾಗೂ ಚಮಚಗಳ ಕೊರತೆ ಇದ್ದರೂ ಇದುವರೆಗೆ ಸಮರ್ಪಕವಾಗಿ ಒದಗಿಸಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಎರಡು ವೆಟ್ ಗ್ರೈಂಡರ್‌ಗಳನ್ನು ಒದಗಿಸಬೇಕಾದ ಸಂದರ್ಭದಲ್ಲಿ ಒಂದನ್ನಷ್ಟೇ ನೀಡಲಾಗಿದೆ. ಪುರಸಭೆಯಿಂದ ಒದಗಿಸಬೇಕಾದ ಹಲವು ಅಡುಗೆ ಸಾಮಗ್ರಿಗಳು ಹಾಗೂ ಅಗತ್ಯ ಸೌಲಭ್ಯಗಳು ಪೂರ್ಣ ಪ್ರಮಾಣದಲ್ಲಿ ದೊರಕಿಲ್ಲ ಎಂಬುದು ಕ್ಯಾಂಟೀನ್ ನಿರ್ವಹಣೆ ವಹಿಸಿಕೊಂಡಿರುವ ಮಯೂರ ಆದಿತ್ಯಾ ರಿಸಾರ್ಟ್ ಸಂಸ್ಥೆಯವರ ಅಳಲಾಗಿದೆ. ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಪುರಸಭೆಗೆ ಮನವಿ ಮಾಡಿದರೂ ಸೂಕ್ತ ಸ್ಪಂದನೆ ದೊರಕಿಲ್ಲ ಎಂಬ ಆರೋಪವೂ ಇದೆ.

 

ಸರ್ಕಾರದಿಂದ ಕ್ಯಾಂಟೀನ್ ನಿರ್ವಹಣೆಗೆ ಹೆಚ್ಚಿನ ಮೊತ್ತ ಖರ್ಚಾಗುತ್ತಿದ್ದರೂ, ಸಾರ್ವಜನಿಕರಿಗೆ ದೊರೆಯಬೇಕಾದ ಗುಣಮಟ್ಟದ ಆಹಾರ ಮತ್ತು ಅಗತ್ಯ ಸೌಲಭ್ಯಗಳು ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ಯಾಂಟೀನ್ ಆರಂಭದ ದಿನಗಳಲ್ಲಿ ದೊರೆಯುತ್ತಿದ್ದ ಅಲ್ಪೋಪಹಾರ ಹಾಗೂ ಮಧ್ಯಾಹ್ನ ಮತ್ತು ಸಂಜೆ ಊಟದ ಗುಣಮಟ್ಟ ಇದೀಗ ಕಾಣುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ರೇಷನ್ ಅಕ್ಕಿ ಬಳಕೆ ಮಾಡಲಾಗುತ್ತಿದೆಯೇ? ಆಹಾರದ ಗುಣಮಟ್ಟ ಮತ್ತು ಕ್ಯಾಂಟೀನ್ ನಿರ್ವಹಣೆಯಲ್ಲಿ ಲೋಪವಾಗಿದೆಯೇ? ಎಂಬುದರ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಕುರಿತು ಪುರಸಭೆ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಾಗಿದೆ.

ನಾನು ಇಲ್ಲಿ ದಿನಾಲು ಊಟ ಮಾಡಲು ಬರುತ್ತೇನೆ ಮೊದ ಮೊದಲು ಚೆನ್ನಾಗಿತ್ತು ಕಳೆದ ಹದಿನೈದು ದಿನಗಳಿಂದ ಕುಡಚಿ ಇಂದಿರಾ ಕ್ಯಾಂಟೀನಿನಲ್ಲಿ ರೇಶನ ಅಕ್ಕಿ ಉಪಯೋಗಿಸುತ್ತಿದ್ದಾರೆ. ಸರ್ಕಾರ ಇವರಿಗೆ ಒಂದು ಊಟಕ್ಕೆ ನೂರಾರು ರೂಪಾಯಿ ನೀಡುತ್ತದೆ ಇವರು ರೇಶನ್ ಅಕ್ಕಿ ಹಾಕುತ್ತಿದ್ದಾರೆ.

-ಪ್ರದೀಪ್ ಪತ್ತಾರ, ಫಲಾನುಭವಿ

Related Articles

Leave a Reply

Your email address will not be published. Required fields are marked *

Back to top button