ಮಹಾರಾಷ್ಟ್ರದಲ್ಲಿಯೂ ನೀರಿನ ಅಭಾವವಿದ್ದು, ರಾಜ್ಯಕ್ಕೆ ನೀರು ಬಿಡುವುದು ಕಷ್ಟಕರ: ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ: ನೆರೆ ರಾಜ್ಯ ಮಹಾರಾಷ್ಟ್ರದಲ್ಲಿಯೂ ತೀವ್ರ ನೀರಿನ ಅಭಾವ ಉಂಟಾಗಿರುವುದರಿಂದ ಅಲ್ಲಿಂದ ನೀರು ಬಿಡುವುದು ಕಷ್ಟಕರ. ಈ ಬಗ್ಗೆ ಮಹಾರಾಷ್ಟ್ರ ರಾಜ್ಯದ ಅಧಿಕಾರಿಗಳು ಈಗಾಗಲೇ ತಮ್ಮ ಅಸಮರ್ಥತೆ ತಿಳಿಸಿರುವುದಾಗಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಹಾರಾಷ್ಟ್ರದಿಂದ ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಈ ವರ್ಷ ಮಾತ್ರವಲ್ಲದೆ ಹಿಂದಿನ ವರ್ಷಗಳಲ್ಲಿಯೂ ರಾಜ್ಯ ಸರ್ಕಾರ ಮನವಿ ಸಲ್ಲಿಸಿದ್ದರೂ ಮಹಾರಾಷ್ಟ್ರದಿಂದ ನಿರೀಕ್ಷಿತ ಪ್ರಮಾಣದಲ್ಲಿ ನೀರು ಬಿಡುಗಡೆಗೊಂಡಿಲ್ಲ. ಕೊಯ್ನಾ ಜಲಾಶಯ ಭರ್ತಿಯಾಗಿದ್ದ ಸಂದರ್ಭಗಳಲ್ಲಿಯೂ ನೀರು ಬಿಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿರಲಿಲ್ಲ ಎಂದು ಅವರು ತಿಳಿಸಿದರು. ಪ್ರಸ್ತುತ ಮಹಾರಾಷ್ಟ್ರದಲ್ಲಿಯೂ ನೀರಿನ ಅಭಾವ ಇರುವುದರಿಂದ ಅಲ್ಲಿನ ಅಧಿಕಾರಿಗಳು ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಈಗಾಗಲೇ ತಿಳಿಸಿದ್ದಾರೆಂದು ಹೇಳಿದರು.
ಬೆಳಗಾವಿ ನಗರದಲ್ಲಿ ಮುಂದಿನ ಎರಡು ತಿಂಗಳಿಗೆ ಸಾಕಾಗುವಷ್ಟು ಕುಡಿಯುವ ನೀರಿನ ಸಂಗ್ರಹ ಲಭ್ಯವಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ. ನೀರಿನ ಕೊರತೆ ಎದುರಾಗುವ ಪ್ರದೇಶಗಳಿಗೆ ಟ್ಯಾಂಕರ್ಗಳ ಮೂಲಕ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದ ಸಚಿವರು, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜು ಸಮರ್ಪಕವಾಗಿ ನಡೆಯುವಂತೆ ಈಗಾಗಲೇ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಬೆಳಗಾವಿ ನಗರದಲ್ಲಿ 24×7 ಗಂಟೆಗಳ ನಿರಂತರ ನೀರು ಸರಬರಾಜು ಯೋಜನೆ ಜಾರಿಯಲ್ಲಿದ್ದರೂ, ಪ್ರಸ್ತುತ ಕೆಲ ಪ್ರದೇಶಗಳಲ್ಲಿ ಹದಿನೈದು ದಿನಕ್ಕೊಮ್ಮೆ ಮಾತ್ರ ನೀರು ಪೂರೈಕೆಯಾಗುತ್ತಿರುವ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಸತೀಶ್ ಜಾರಕಿಹೊಳಿ, ಯೋಜನೆಯ ಕಾಮಗಾರಿಗಳು ಇನ್ನೂ ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ನಗರದಲ್ಲಿ ಲಭ್ಯವಿರುವ ನೀರಿನ ಪ್ರಮಾಣ, ವಿತರಣಾ ವ್ಯವಸ್ಥೆ ಹಾಗೂ ತಾಂತ್ರಿಕ ಅಡಚಣೆಗಳನ್ನು ಪರಿಗಣಿಸಿ ನೀರು ಪೂರೈಕೆ ಮಾಡಲಾಗುತ್ತಿದೆ. ಯೋಜನೆ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದ ಬಳಿಕ ನಿರಂತರ ನೀರು ಸರಬರಾಜಿನ ಉದ್ದೇಶವನ್ನು ಸಾಧಿಸಲಾಗುವುದು ಎಂದು ಅವರು ಹೇಳಿದರು.
ಮಹಾನಗರ ಪಾಲಿಕೆಯ ಕಾರ್ಯವೈಖರಿಯ ಕುರಿತು ಪ್ರತಿಕ್ರಿಯಿಸಿದ ಸಚಿವರು, ಸ್ಥಳೀಯ ನೀರಿನ ಸಮಸ್ಯೆ ಸೇರಿದಂತೆ ವಿವಿಧ ನಾಗರಿಕ ಸಮಸ್ಯೆಗಳನ್ನು ಮಹಾನಗರ ಪಾಲಿಕೆ ಸರ್ಕಾರದ ಗಮನಕ್ಕೆ ಸಮರ್ಪಕವಾಗಿ ತರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಮಸ್ಯೆಗಳ ಕುರಿತು ಸ್ಪಷ್ಟ ಮತ್ತು ಸಮಗ್ರ ಮಾಹಿತಿ ದೊರೆತರೆ ಮಾತ್ರ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಂಡು ಸೂಕ್ತ ಪರಿಹಾರ ಕಲ್ಪಿಸಲು ಸಾಧ್ಯವಾಗುತ್ತದೆ ಎಂದರು.
ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ಯಮಕನಮರಡಿ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಚಟುವಟಿಕೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ, “ಇಂತಹ ಪರಿಸ್ಥಿತಿಗಳನ್ನು ಹಿಂದೆ ಕೂಡ ನೋಡಿದ್ದೇವೆ. ಚುನಾವಣೆ ಸಮೀಪ ಬಂದಾಗ ಅದರ ಬಗ್ಗೆ ಚರ್ಚಿಸೋಣ” ಎಂದು ಪ್ರತಿಕ್ರಿಯಿಸಿದ



