ರಾಜಕೀಯರಾಜ್ಯ

ಖಾನಾಪುರ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ: ವಾಲ್ಮೀಕಿ ಯುವ ಘಟಕದಿಂದ ಉಗ್ರ ಪ್ರತಿಭಟನೆ

ಖಾನಾಪುರ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ: ವಾಲ್ಮೀಕಿ ಯುವ ಘಟಕದಿಂದ ಉಗ್ರ ಪ್ರತಿಭಟನೆ
• ನೆರಸೆ ಗ್ರಾಮದ ಸ್ಮಶಾನ ಭೂಮಿ ಒತ್ತುವರಿ ಆರೋಪ
• ತಹಶೀಲ್ದಾರ್ ಕಚೇರಿಗೆ ಬೀಗ ಹಾಕಿ ಮುತ್ತಿಗೆ ಯತ್ನ
• ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ
• ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ
ಹಿಡಕಲ್ ಡ್ಯಾಂ ಸಂತ್ರಸ್ತರಿಗೆ ಮಂಜೂರಾಗಿದ್ದ ಸ್ಮಶಾನ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದನ್ನು ವಿರೋಧಿಸಿ ಹಾಗೂ ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಖಾನಾಪುರದಲ್ಲಿ ಇಂದು ಉಗ್ರ ಪ್ರತಿಭಟನೆ ನಡೆಯಿತು. ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕದ ನೇತೃತ್ವದಲ್ಲಿ ಪ್ರತಿಭಟನಾಕಾರರು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ, ಬೀಗ ಜಡಿಯಲು ಯತ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ಖಾನಾಪುರ ತಾಲೂಕಿನ ನೆರಸೆ ಗ್ರಾಮದಲ್ಲಿ ಹಿಡಕಲ್ ಜಲಾಶಯಕ್ಕಾಗಿ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಸ್ಮಶಾನ ಹಾಗೂ ಇನ್ನಿತರ ಸಾರ್ವಜನಿಕ ಅನುಕೂಲಕ್ಕಾಗಿ 4 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು. ಆದರೆ, ಆ ಗ್ರಾಮದ ಒಂದು ಕುಟುಂಬವು ಈ ಜಮೀನಿನಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಘಟನೆಯು ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಜಿಲ್ಲಾಧಿಕಾರಿಗಳು ತಹಶೀಲ್ದಾರ್ ಅವರಿಗೆ ಸಮಸ್ಯೆ ಬಗೆಹರಿಸುವಂತೆ ಆದೇಶಿಸಿದ್ದರು. ಆದರೆ ಖಾನಾಪುರ ತಹಶೀಲ್ದಾರ್ ಅವರು ಈ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ತೋರುತ್ತಿದ್ದಾರೆ ಎಂದು ಆರೋಪಿಸಿ ವಾಲ್ಮೀಕಿ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ಮಹೇಶ್ ಎಸ್. ಶಿಗೀಹಳ್ಳಿ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ, ಸರ್ಕಾರದ ವಿರುದ್ಧ ತೀವ್ರವಾಗಿ ಘೋಷಣೆಗಳನ್ನು ಕೂಗಲಾಯಿತು.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಮಹೇಶ್ ಎಸ್. ಶಿಗೀಹಳ್ಳಿ, ಒತ್ತುವರಿಯಾಗಿರುವ ಜಮೀನನ್ನು ಸಂಪೂರ್ಣವಾಗಿ ಮುಕ್ತಗೊಳಿಸಿ, ತಕ್ಷಣವೇ ಸ್ಮಶಾನ ಭೂಮಿಗೆ ಸಂಬಂಧಿಸಿದ ರಿ.ಸ.ನಂ. 43 ಮತ್ತು 37ಬ ಉತಾರೆಗಳನ್ನು ಹಾಗೂ ಡೈರಿ ಉತಾರೆಯನ್ನು ಸರಿಪಡಿಸಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇಡೀ ತಾಲೂಕಿನಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖ ಮುಖಂಡರಾದ ಮಹೇಶ್ ಎಸ್. ಶಿಗೀಹಳ್ಳಿ, ಕಮಲ ಪೂಜಾರಿ, ಲಕ್ಷ್ಮಣ್ ಬಾಗಡಿ, ರಾಜು ನಾಯಿಕ, ಆನಂದ ಉದ್ದಿ, ಬಾಬು ಹತ್ತರವಾಡ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *

Back to top button