Uncategorized

ಕಿತ್ತೂರಿನಲ್ಲಿ ಕಮಲಕ್ಕೆ ಶಾಕ್: ಕೈ ಹಿಡಿದ 60ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು!

ಬೆಳಗಾವಿ ಜಿಲ್ಲೆಯ ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬೆನ್ನಲ್ಲೇ, ಬಿಜೆಪಿಯ ಭದ್ರಕೋಟೆಗೆ ಕಾಂಗ್ರೆಸ್ ಲಗ್ಗೆ ಇಟ್ಟಿದ್ದು, ಜಟಾಪಟಿ ತಾರಕಕ್ಕೇರಿದೆ.
ಕಿತ್ತೂರು ಕ್ಷೇತ್ರದ ಚಿಕ್ಕಬಾಗೇವಾಡಿ ಗ್ರಾಮದ ಬಿಜೆಪಿಯ ಸುಮಾರು 50 ರಿಂದ 60 ಪ್ರಮುಖ ಕಾರ್ಯಕರ್ತರು ಹಾಗೂ ಮುಖಂಡರು ಇಂದು ಕೇಸರಿ ಕಲಿಗಳನ್ನು ತೊರೆದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಯುವ ಮುಖಂಡ ಶಂಕರ್ ಅರ್ಜುನ ಪಾಟೀಲ್ (ಪೈಲ್ವಾನ್) ಅವರ ನೇತೃತ್ವದಲ್ಲಿ ನಡೆದ ಈ ಪಕ್ಷಾಂತರ ಪ್ರಕ್ರಿಯೆಯು ಕ್ಷೇತ್ರದ ಸಾರ್ವಜನಿಕ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಸ್ಥಳೀಯ ಶಾಸಕರಾದ ಬಾಬಾಸಾಹೇಬ್ ಪಾಟೀಲ್ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ತಾವೆಲ್ಲರೂ ಸ್ವಯಂಪ್ರೇರಿತರಾಗಿ ಕಾಂಗ್ರೆಸ್ ಪಕ್ಷವನ್ನು ಒಪ್ಪಿಕೊಂಡಿರುವುದಾಗಿ ಸೇರ್ಪಡೆಯಾದ ಯುವಕರು ಮತ್ತು ಮುಖಂಡರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
ಪಕ್ಷಕ್ಕೆ ಸೇರಿದ ನೂತನ ಸದಸ್ಯರನ್ನು ಆತ್ಮೀಯವಾಗಿ ಬರಮಾಡಿಕೊಂಡ ಶಾಸಕ ಬಾಬಾಸಾಹೇಬ್ ಪಾಟೀಲ್ ಹಾಗೂ ರೋಹಿಣಿ ಬಾಬಾಸಾಹೇಬ್ ಪಾಟೀಲ್ ಅವರು ಪಕ್ಷದಲ್ಲಿ ಯಾರನ್ನೂ ತಾರತಮ್ಯ ಮಾಡದೆ ಎಲ್ಲರನ್ನೂ ಕುಟುಂಬದ ಸದಸ್ಯರಂತೆ ನಡೆಸಿಕೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೆ, ಮುಂಬರುವ ಎರಡು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಿದ್ದು, ಗ್ರಾಮಸ್ಥರು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ತಮ್ಮನ್ನು ಸಂಪರ್ಕಿಸಬಹುದು ಎಂದು ಧೈರ್ಯ ತುಂಬಿದರು. ಈ ರಾಜಕೀಯ ಧ್ರುವೀಕರಣವು ಮುಂಬರುವ ತಾಲೂಕು, ಜಿಲ್ಲಾ ಹಾಗೂ ಗ್ರಾಮ ಪಂಚಾಯತಿ ಚುನಾವಣೆಗಳ ಮೇಲೆ ದಟ್ಟವಾದ ಪರಿಣಾಮ ಬೀರುವ ಮುನ್ಸೂಚನೆ ನೀಡಿದೆ.

Related Articles

Leave a Reply

Your email address will not be published. Required fields are marked *

Back to top button