Uncategorized

ಉದ್ಯೋಗಕ್ಕಾಗಿ ನೇಪಾಳಕ್ಕೆ ತೆರಳಿದ್ದ ಬೆಳಗಾವಿ ಜಿಲ್ಲೆಯ ಖಾನಾಪುರ ಮೂಲದ ಯುವಕನ ಇರಿದು ಭೀಕರವಾಗಿ ಕೊಲೆ

ಉದ್ಯೋಗಕ್ಕಾಗಿ ನೇಪಾಳಕ್ಕೆ ತೆರಳಿದ್ದ ಬೆಳಗಾವಿ ಜಿಲ್ಲೆಯ ಖಾನಾಪುರ ಮೂಲದ ಯುವಕನೊಬ್ಬನನ್ನು ಆತನ ರೂಮ್ ಪಾರ್ಟ್ನರ್ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಕೇವಲ ೨೫ ದಿನಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದ ಸಾಹಿಲ್ ಮೊಮಿನ್ (೨೫) ದುರಂತ ಅಂತ್ಯ ಕಂಡ ದುರ್ದೈವಿಯಾಗಿದ್ದು, ಕೊಲೆಗಡುಕ ಸದ್ದಾಂ ಹುಸೇನ್ ಸದ್ಯ ತಲೆಮರೆಸಿಕೊಂಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ನೇಪಾಳ ಪೊಲೀಸರು ಮತ್ತು ಬೆಳಗಾವಿ ಪೊಲೀಸರು ಆರೋಪಿಗಾಗಿ ತೀವ್ರ ಜಾಲ ಬೀಸಿದ್ದಾರೆ.ನೇಪಾಳದ ಜಾಫಾ ಜಿಲ್ಲೆಯ ದಮಕ್ ಎಂಬಲ್ಲಿನ ಹೋಟೆಲ್‌ ಒಂದರಲ್ಲಿ ಕೆಲಸಕ್ಕಿದ್ದ ಖಾನಾಪುರದ ಮುಸ್ಲಿಂ ನಿಂಗಾಪುರ ಗಲ್ಲಿಯ ಸಾಹಿಲ್ ಮೊಮಿನ್ ಎಂಬ ಯುವಕನನ್ನು, ಉತ್ತರ ಪ್ರದೇಶ ಮೂಲದ ರೂಮ್ ಪಾರ್ಟ್ನರ್ ಸದ್ದಾಂ ಹುಸೇನ್ ಎಂಬಾತ ಶುಕ್ರವಾರ ಮುಂಜಾನೆ ಭೀಕರವಾಗಿ ಕೊಲೆ ಮಾಡಿದ್ದಾನೆ.
ಘಟನೆಯ ಹಿಂದಿನ ರಾತ್ರಿ ಇಬ್ಬರ ನಡುವೆ ಗಲಾಟೆಯಾಗಿದ್ದು, ಮುಂಜಾನೆ ಸಾಹಿಲ್ ಮಲಗಿದ್ದಾಗ ಹೊಟ್ಟೆಗೆ ಚಾಕುವಿನಿಂದ ಇರಿದು ಆರೋಪಿ ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡಿದ್ದ ಸಾಹಿಲ್ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ. ಸಾಮಾಜಿಕ ಕಾರ್ಯಕರ್ತರ ನೆರವಿನೊಂದಿಗೆ ಮೃತನ ಕುಟುಂಬಸ್ಥರು ಮೃತದೇಹ ತರಲು ನೇಪಾಳಕ್ಕೆ ತೆರಳಿದ್ದು, ಸೋಮವಾರದ ವೇಳೆಗೆ ಶವ ಖಾನಾಪುರಕ್ಕೆ ತಲುಪುವ ಸಾಧ್ಯತೆಯಿದೆ.
ಆರೋಪಿ ಉತ್ತರ ಪ್ರದೇಶಕ್ಕೆ ಓಡಿಹೋಗಿರುವ ಶಂಕೆಯಿದ್ದು, ಬೆಳಗಾವಿ ಪೊಲೀಸರು ಆ ಭಾಗದ ಪೊಲೀಸರೊಂದಿಗೆ ಸಂಪರ್ಕ ಸಾಧಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಶಾಂತ ಸ್ವಭಾವದ ಸಾಹಿಲ್ ಸಾವಿನಿಂದ ಖಾನಾಪುರದಲ್ಲಿ ಸೂತಕದ ಛಾಯೆ ಆವರಿಸಿದೆ.

Related Articles

Leave a Reply

Your email address will not be published. Required fields are marked *

Back to top button