Uncategorized

ರಾಜ್ಯದ ಗಮನ ಸೆಳೆದಿರುವ ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಶಿಕ್ಷಿತ ಕೈದಿಗಳು ಪರಾರಿ

ಕಲಬುರಗಿ: ರಾಜ್ಯದ ಗಮನ ಸೆಳೆದಿರುವ ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಶಿಕ್ಷಿತ ಕೈದಿಗಳು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹದ ಸಿಸಿ ಟಿವಿ ದೃಶ್ಯಗಳು ಇದೀಗ ವೈರಲ್ ಆಗಿದ್ದು, ಜೈಲಿನ ಭದ್ರತಾ ವ್ಯವಸ್ಥೆಯ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ.
ಮಂಗಳವಾರ ಮುಂಜಾನೆ ಕೇಂದ್ರ ಕಾರಾಗೃಹದಿಂದ ಪೋಕ್ಸೋ, ಕೊಲೆ ಹಾಗೂ ಕೊಲೆ ಯತ್ನದಂತಹ ಗಂಭೀರ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಮೂವರು ಕೈದಿಗಳು ಪರಾರಿಯಾಗಿದ್ದರು. ಇದೀಗ ಹೊರಬಿದ್ದಿರುವ ಸಿಸಿ ಟಿವಿ ದೃಶ್ಯಗಳಲ್ಲಿ ಆರೋಪಿಗಳು ಸುಮಾರು 20 ಅಡಿ ಎತ್ತರದ ಕಾಂಪೌಂಡ್ ಗೋಡೆಯನ್ನು ಹತ್ತಿ ಜಿಗಿದು ಪರಾರಿಯಾಗುತ್ತಿರುವುದು ಸ್ಪಷ್ಟವಾಗಿ ಕಾಣಿಸಿದೆ.
ವಿಡಿಯೋದಲ್ಲಿ ಮೂವರು ಕೈದಿಗಳು ಜೈಲಿನ ಒಳಭಾಗದಿಂದ ಗೋಡೆಯ ಸಮೀಪಕ್ಕೆ ತೆರಳಿ, ಗೋಡೆಯನ್ನು ಏರಿ ಹೊರಭಾಗಕ್ಕೆ ಜಿಗಿಯುತ್ತಿರುವ ದೃಶ್ಯ ದಾಖಲಾಗಿದೆ. ಇಷ್ಟೊಂದು ಎತ್ತರದ ಭದ್ರತಾ ಗೋಡೆಯನ್ನು ದಾಟಿ ಆರೋಪಿಗಳು ಪರಾರಿಯಾಗಿರುವುದು ಜೈಲು ಆಡಳಿತದ ನಿರ್ಲಕ್ಷ್ಯ ಹಾಗೂ ಭದ್ರತಾ ಲೋಪವನ್ನು ಬಯಲಿಗೆಳೆದಿದೆ
ಘಟನೆ ಬೆಳಕಿಗೆ ಬಂದ ತಕ್ಷಣ ಕಲಬುರಗಿ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ವ್ಯಾಪಕ ಶೋಧ ಕಾರ್ಯ ಆರಂಭಿಸಲಾಗಿತ್ತು. ಈ ನಡುವೆ ಪರಾರಿಯಾಗಿದ್ದ ಆರೋಪಿಗಳ ಪೈಕಿ ಸಂತೋಷ್ ಎಂಬಾತನನ್ನು ಬೀದರ್ ಜಿಲ್ಲೆಯ ಹುಮನಾಬಾದ್ ಆರ್‌ಟಿಒ ವೃತ್ತದ ಬಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ಇಬ್ಬರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.
ಪರಾರಿ ಪ್ರಕರಣ ರಾಜ್ಯದಾದ್ಯಂತ ಸಂಚಲನ ಮೂಡಿಸಿದ್ದು, ಕಾರಾಗೃಹದ ಭದ್ರತಾ ವ್ಯವಸ್ಥೆ, ಸಿಬ್ಬಂದಿಯ ಕರ್ತವ್ಯ ನಿರ್ವಹಣೆ ಹಾಗೂ ಸಿಸಿ ಟಿವಿ ನಿಗಾ ವ್ಯವಸ್ಥೆಯ ಕುರಿತು ಸಮಗ್ರ ತನಿಖೆ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಘಟನೆಯ ಕುರಿತು ಹಿರಿಯ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಭದ್ರತಾ ವೈಫಲ್ಯಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

Related Articles

Leave a Reply

Your email address will not be published. Required fields are marked *

Back to top button