Uncategorized
ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಭೇಟಿ: ಖಾನಾಪುರ ದಲಿತ ಮಹಿಳೆಯರ ಆರೋಗ್ಯ ವಿಚಾರಣೆ

ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಭೇಟಿ: ಖಾನಾಪುರ ದಲಿತ ಮಹಿಳೆಯರ ಆರೋಗ್ಯ ವಿಚಾರಣೆ
ಖಾನಾಪುರ ತಾಲೂಕಿನ ಹೊನ್ನಕಲ ಗ್ರಾಮದಲ್ಲಿ ದಲಿತ ಮಹಿಳೆಯರ ಮೇಲೆ ನಡೆದ ಜಾತಿನಿಂದನೆ ಮತ್ತು ಭೀಕರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಸಮಾಜ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳು ಇಂದು ಖುದ್ದಾಗಿ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
ಖಾನಾಪುರ ತಾಲೂಕಿನ ಹೊನ್ನಕಲ ಗ್ರಾಮದಲ್ಲಿ ಇಬ್ಬರು ದಲಿತ ಮಹಿಳೆಯರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಜಾತಿನಿಂದನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಾಮನಗೌಡ ಕನ್ನೊಳ್ಳಿ ಹಾಗೂ ಖಾನಾಪುರ ತಾಲೂಕು ಸಹಾಯಕ ನಿರ್ದೇಶಕರಾದ ಬಸವರಾಜ್ ಚನ್ನವರ ಅವರು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಜಂಟಿಯಾಗಿ ಭೇಟಿ ನೀಡಿದರು. ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಗಾಯಾಳುಗಳ ಆರೋಗ್ಯ ಸ್ಥಿತಿಯನ್ನು ವಿಚಾರಿಸಿದ ಅಧಿಕಾರಿಗಳು, ಘಟನೆಯ ಕುರಿತು ಮಾಹಿತಿ ಪಡೆದುಕೊಂಡರು. ಈ ಭೇಟಿಯ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ (ಸಂಯೋಜಕ ಸಂಘಟನೆ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಹಿಂಡಲಗಿ, ಮುಖಂಡರುಗಳಾದ ರಾಘವೇಂದ್ರ ಚಲವಾದಿ, ಮಾರುತಿ ಕಾಂಬಳೆ, ನಾಗಪ್ಪ ಮಾದರ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದು, ಗಾಯಾಳುಗಳಿಗೆ ಸೂಕ್ತ ನ್ಯಾಯ ಒದಗಿಸುವಂತೆ ಅಧಿಕಾರಿಗಳ ಗಮನ ಸೆಳೆದರು.


