ರಾಜಕೀಯರಾಜ್ಯವಿಜಯಪುರ

ಭೀಮಾತೀರದಲ್ಲಿ 6 ಜನರ ಹತ್ಯೆ: ಆಸ್ತಿ ವಿವಾದಕ್ಕೆ ಕಣ್ಣಿಗೆ ಖಾರದ ಪುಡಿ ಎರಚಿ ಒಂದೇ ಕುಟುಂಬದವರ ಬರ್ಬರ ಹತ್ಯೆ!

ಭೀಮಾತೀರದಲ್ಲಿ 6 ಜನರ ಹತ್ಯೆ: ಆಸ್ತಿ ವಿವಾದಕ್ಕೆ ಕಣ್ಣಿಗೆ ಖಾರದ ಪುಡಿ ಎರಚಿ ಒಂದೇ ಕುಟುಂಬದವರ ಬರ್ಬರ ಹತ್ಯೆ!

ಭೀಮಾತೀರದಲ್ಲಿ 6 ಜನರ ಹತ್ಯೆ: ಆಸ್ತಿ ವಿವಾದಕ್ಕೆ ಕಣ್ಣಿಗೆ ಖಾರದ ಪುಡಿ ಎರಚಿ ಒಂದೇ ಕುಟುಂಬದವರ ಬರ್ಬರ ಹತ್ಯೆ!
​ವಿಜಯಪುರ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಹಳೆಯ ಆಸ್ತಿ ವಿವಾದ ಹಾಗೂ ವೈಷಮ್ಯದ ಹಿನ್ನೆಲೆಯಲ್ಲಿ, ದುಷ್ಕರ್ಮಿಗಳ ತಂಡವೊಂದು ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಕೊಚ್ಚಿ ಒಂದೇ ಕುಟುಂಬದ ಆರು ಜನರನ್ನು ಬರ್ಬರವಾಗಿ ಕೊಲೆ ಮಾಡಿದೆ. ಈ ಆಘಾತಕಾರಿ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಭೀಮಾ ನದಿ ತೀರದ ಗೋವಿಂದಪುರ ಗ್ರಾಮದಲ್ಲಿ ನಡೆದಿದ್ದು, ಇಡೀ ಜಿಲ್ಲೆಯನ್ನು ನಡುಗಿಸಿದೆ.
​ಚಡಚಣ ಪಟ್ಟಣದ ಒಂದೇ ಕುಟುಂಬಕ್ಕೆ ಸೇರಿದ ದುಂಡಪ್ಪ ನಿರಾಳೆ (65), ಶಿವಪುತ್ರ ನಿರಾಳೆ (58), ಚಂದ್ರಕಾಂತ ನಿರಾಳೆ (55), ರಾಹುಲ್‌ ನಿರಾಳೆ (25), ಸಮರ್ಥ ನಿರಾಳೆ (23) ಮತ್ತು ಇವರ ಜತೆಗಿದ್ದ ಶಬ್ಭೀರ್‌ ಅತ್ತಾರ (45) ಕೊಲೆಯಾದ ದುರ್ದೈವಿಗಳು. ದಾಳಿಯಲ್ಲಿ ಅರವಿಂದ ಕಟಗಿ (72) ಮತ್ತು ಸಂದೀಪ ಮಾನೆ (23) ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
🚨 ಏನಿದು ವಿವಾದ? ಕೊಲೆಗೆ ಅಸಲಿ ಕಾರಣವೇನು?
​ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ಭೀಕರ ಕೃತ್ಯಕ್ಕೆ 25 ಎಕರೆ ವಿವಾದಿತ ಜಮೀನು ಖರೀದಿಯೇ ಮೂಲ ಕಾರಣ ಎನ್ನಲಾಗಿದೆ.
​ಗೋವಿಂದಪುರ ಗ್ರಾಮದ ಶಶಿಕಾಂತ ತೇಲಿ ಎಂಬುವವರ ಕುಟುಂಬಕ್ಕೆ ಸೇರಿದ ಸುಮಾರು 25 ಎಕರೆ ಜಮೀನನ್ನು ಚಡಚಣದ ನಿರಾಳೆ ಕುಟುಂಬದವರು ಆರು ತಿಂಗಳ ಹಿಂದೆ ಖರೀದಿಸಿದ್ದರು. ಆದರೆ, ಈ ಜಮೀನಿನ ಮೇಲೆ ಕಣ್ಣಿಟ್ಟಿದ್ದ ಗೋವಿಂದಪುರದ ಕಲ್ಲನಗೌಡ ಈಶ್ವರಗೌಡ ಪಾಟೀಲ ಮತ್ತು ಆತನ ಕಡೆಯವರು, “ಈ ವಿವಾದಿತ ಜಮೀನನ್ನು ಖರೀದಿಸಬೇಡಿ” ಎಂದು ನಿರಾಳೆ ಕುಟುಂಬಕ್ಕೆ ಮೊದಲೇ ಎಚ್ಚರಿಕೆ ನೀಡಿದ್ದರು. ಆ ಬೆದರಿಕೆಯನ್ನು ಲೆಕ್ಕಿಸದೆ ನಿರಾಳೆ ಕುಟುಂಬ ಜಮೀನು ಖರೀದಿಸಿತ್ತು.
🚜 ಹೊಲ ಸ್ವಚ್ಛಗೊಳಿಸುವಾಗ ಮುಗಿಬಿದ್ದ 20 ಜನರ ಗ್ಯಾಂಗ್!
​ಹಳೆಯ ಕೊಲೆ ಪ್ರಕರಣವೊಂದರ ಬಳಿಕ ತೇಲಿ ಕುಟುಂಬದವರು ಊರು ಬಿಟ್ಟು ಹೋಗಿದ್ದರಿಂದ, ಕಳೆದ 15 ವರ್ಷಗಳಿಂದ ಈ 25 ಎಕರೆ ಜಮೀನು ಉಳುಮೆ ಇಲ್ಲದೆ ಪಾಳು ಬಿದ್ದಿತ್ತು. ಜಮೀನು ಖರೀದಿಸಿದ್ದ ನಿರಾಳೆ ಕುಟುಂಬದವರು ಶುಕ್ರವಾರ ಟ್ರ್ಯಾಕ್ಟರ್ ಹಾಗೂ ಜೆಸಿಬಿ ಮೂಲಕ ಹೊಲವನ್ನು ಸ್ವಚ್ಛಗೊಳಿಸಿ, ಕೃಷಿಗೆ ಸಜ್ಜುಗೊಳಿಸುತ್ತಿದ್ದರು.
​ಈ ವಿಷಯ ತಿಳಿದ ಆರೋಪಿ ಪಾಟೀಲನ ಕಡೆಯ 15 ರಿಂದ 20 ದುಷ್ಕರ್ಮಿಗಳ ಗ್ಯಾಂಗ್ ಏಕಾಏಕಿ ಹೊಲದ ಮೇಲೆ ದಾಳಿ ನಡೆಸಿದೆ. ತಕ್ಷಣವೇ ಕಣ್ಣಿಗೆ ಖಾರದ ಪುಡಿ ಎರಚಿ, ಕತ್ತಲಾವರಿಸುವಂತೆ ಮಾಡಿ, ಬಳಿಕ ಮಾರಕಾಸ್ತ್ರಗಳಿಂದ ಮನಸೋಇಚ್ಛೆ ಕೊಚ್ಚಿ ಆರು ಜನರನ್ನು ಸ್ಥಳದಲ್ಲೇ ಹೆಣ ಮುಗಿಸಿದ್ದಾರೆ.
⚠️ ಇದರ ಹಿಂದೆ ಇದೆಯಾ ಹಳೇ ಹತ್ಯೆಯ ಲಿಂಕ್?
​ಈ ಕೃತ್ಯದ ಹಿಂದೆ ದೊಡ್ಡದೊಂದು ಫ್ಲ್ಯಾಶ್‌ಬ್ಯಾಕ್ ಇದೆ. ಈ ಹಿಂದೆ ಗೋವಿಂದಪುರದ ಕಲ್ಲನಗೌಡ ಪಾಟೀಲ ಅವರ ಪುತ್ರ ಶಿವಾನಂದ ಎಂಬುವವರು ಅದೇ ಊರಿನ ಶಶಿಕಾಂತ ತೇಲಿ ಅವರ ಪುತ್ರಿಯನ್ನು ಅಪಹರಿಸಿದ್ದರು. ಇದರಿಂದ ಕೆರಳಿದ ತೇಲಿ ಕುಟುಂಬದವರು ಶಿವಾನಂದ ಅವರನ್ನು ಕೊಲೆ ಮಾಡಿದ್ದರು. ಈ ಕೊಲೆ ಕೇಸ್‌ನಲ್ಲಿ ತೇಲಿ ಕುಟುಂಬ ಸದ್ಯ ಶಿಕ್ಷೆ ಅನುಭವಿಸುತ್ತಿದೆ. ಅವರು ಊರು ಬಿಟ್ಟಿದ್ದರಿಂದ ಜಮೀನು ಖಾಲಿ ಇತ್ತು. ಅದನ್ನು ಬೇರೆ ಯಾರೂ ಕೊಳ್ಳದಂತೆ ಪಾಟೀಲ ಕುಟುಂಬ ತಡೆದಿತ್ತು. ಆದರೆ ನಿರಾಳೆ ಕುಟುಂಬ ಇದನ್ನು ಖರೀದಿಸಿದ್ದೇ ಇಷ್ಟೆಲ್ಲಾ ರಕ್ತಪಾತಕ್ಕೆ ಕಾರಣವಾಗಿದೆ.
​”ಆರೋಪಿಗಳ ಪತ್ತೆಗಾಗಿ ಪೊಲೀಸರು ಈಗಾಗಲೇ ಜಾಲ ಬೀಸಿದ್ದು, ತನಿಖೆ ತೀವ್ರಗೊಂಡಿದೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ಸ್ಥಳದಲ್ಲಿ ಸದ್ಯ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button