ರಾಜಕೀಯರಾಜ್ಯ

ಸ್ಕೂಟಿಯಲ್ಲಿ ಗೋವಾ ಮದ್ಯ ಸಾಗಾಟ: 432 ಬಾಟಲಿಗಳೊಂದಿಗೆ ಒಬ್ಬ ಸಿಕ್ಕಿಬಿದ್ದ, ಇಬ್ಬರು ಪರಾರಿ

ಕಾರವಾರ: ಸ್ಕೂಟಿಗಳಲ್ಲಿ ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಜಾಲವನ್ನು ಚಿತ್ತಾಕುಲಾ ಪೊಲೀಸರು ಭೇದಿಸಿದ್ದು, ಒಟ್ಟು 432 ಮದ್ಯದ ಬಾಟಲಿಗಳು ಹಾಗೂ ಎರಡು ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಕಾರವಾರ ತಾಲೂಕಿನ ಮುಡಗೇರಿ ಡ್ಯಾಂ ಸಮೀಪ ಸೋಮವಾರ ಮಧ್ಯಾಹ್ನ ನಡೆದ ಕಾರ್ಯಾಚರಣೆಯಲ್ಲಿ ಅಸ್ಪೋಟಿ ಗ್ರಾಮದ ಆರವ ಫಂಟಲ್ ಭಾಗದ ನಿವಾಸಿ ಸತೀಶ ಕಲ್ಗುಟಕರ (45) ಸಿಕ್ಕಿಬಿದ್ದಿದ್ದು, ಮುಡಗೇರಿ ಗ್ರಾಮದ ಸಂಜಯ ಪಡ್ನೇಕರ (40) ಹಾಗೂ ಚೇತನ ಬಾನಾವಳಿಕರ (41) ಸ್ಥಳದಿಂದ ಪರಾರಿಯಾಗಿದ್ದಾರೆ.
ಆರೋಪಿಗಳು ಯಾವುದೇ ಪಾಸ್ ಅಥವಾ ಪರವಾನಗಿ ಇಲ್ಲದೆ ಗೋವಾ ರಾಜ್ಯದಲ್ಲಿ ತಯಾರಿಸಲಾದ ವಿವಿಧ ಬ್ರ್ಯಾಂಡ್‌ಗಳ ಮದ್ಯವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಎರಡು ಸ್ಕೂಟಿಗಳಲ್ಲಿ ಸಾಗಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.
ಕಾರ್ಯಾಚರಣೆಯಲ್ಲಿ ವಿವಿಧ ರೀತಿಯ ಒಟ್ಟು 432 ಮದ್ಯದ ಬಾಟಲಿಗಳನ್ನು ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಲಾದ ಮದ್ಯದ ಮೌಲ್ಯ ₹26,904 ಆಗಿದ್ದು, ಎರಡು ದ್ವಿಚಕ್ರ ವಾಹನಗಳೊಂದಿಗೆ ಒಟ್ಟು ಜಪ್ತಿ ಸ್ವತ್ತಿನ ಮೌಲ್ಯ ₹30,904 ಎಂದು ಅಂದಾಜಿಸಲಾಗಿದೆ.
ಪೊಲೀಸ್ ಉಪನಿರೀಕ್ಷಕ ಪರಶುರಾಮ ಬಿ. ಮಿರ್ಜಗಿ ಅವರ ದೂರಿನ ಮೇರೆಗೆ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಕ್ಕಿಬಿದ್ದ ಆರೋಪಿಗೆ ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿದ್ದು, ಪರಾರಿಯಾಗಿರುವ ಇಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಸಿಪಿಐ ಪ್ರಭಾಕರ ಧರ್ಮಟ್ಟಿ ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐ ಪರಶುರಾಮ ಬಿ. ಮಿರ್ಜಗಿ ನೇತೃತ್ವದಲ್ಲಿ ಸಿಬ್ಬಂದಿಗಳಿಗಳು ಈ ಕಾರ್ಯಾಚರಣೆ ಭಾಗಿಯಾಗಿದ್ದರು.

Related Articles

Leave a Reply

Your email address will not be published. Required fields are marked *

Back to top button