Uncategorized
ಬೆಂಗಳೂರಿನಾಚೆಗೆ ಮತ್ತಷ್ಟು ಬೆಂಗಳೂರುಗಳನ್ನು ನಿರ್ಮಿಸಲು ನಮ್ಮ ಸರ್ಕಾರ ಮುಂದಾಗಿದೆ.:ಸಿಎಂ ಡಿ ಕೆ ಶಿ

ಬೆಂಗಳೂರಿನಾಚೆಗೆ ಮತ್ತಷ್ಟು ಬೆಂಗಳೂರುಗಳನ್ನು ನಿರ್ಮಿಸಲು ನಮ್ಮ ಸರ್ಕಾರ ಮುಂದಾಗಿದೆ. ಬೆಂಗಳೂರಿನಲ್ಲಿರುವ ಎಲ್ಲಾ ಸೌಕರ್ಯಗಳನ್ನು ರಾಜ್ಯದ ಎರಡು ಹಾಗೂ ಮೂರನೇ ಹಂತದ ನಗರಗಳಿಗೂ ಒದಗಿಸಲು ಬದ್ಧರಾಗಿದ್ದೇವೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಬುಧವಾರ ನಡೆದ ಟಾರ್ಗೆಟ್ ಇಂಡಿಯಾ ಕಾರ್ಯಕ್ರಮದಲ್ಲಿ ಹಾಗೂ ಬಳಿಕ ಮಾಧ್ಯಮಗಳ ಜೊತೆ ಶಿವಕುಮಾರ್ ಅವರು ಮಾತನಾಡಿದರು.
“ಬೆಂಗಳೂರಿನಲ್ಲಿ ಕಚೇರಿ ಜಾಗದ ಬಾಡಿಗೆ 1 ರಿಂದ 1.5 ಡಾಲರ್ ಇದೆ. ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ಅರ್ಧ ಡಾಲರ್ ಗೆ ಸಿಗುತ್ತದೆ. ಅಲ್ಲಿ ಡಬಲ್ ಎಫ್ಎಆರ್ ನೀಡಲು ಮುಂದಾಗಿದ್ದೇವೆ. ಆ ಮೂಲಕ ಅಲ್ಲಿಯೂ ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ನೀಡಲು ಮುಂದಾಗಿದ್ದೇವೆ. ಕರ್ನಾಟಕದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲಾಗುತ್ತಿದೆ. ನಿಮ್ಮ ಸಲಹೆಗಳಿಗೆ ನಾವು ಮುಕ್ತರಾಗಿದ್ದೇವೆ” ಎಂದರು.
“ನೀವೆಲ್ಲರೂ ಬಲಿಷ್ಠವಾಗಿ ಬೆಳೆಯಲು ಎಲ್ಲಾ ಸಹಕಾರ ನೀಡಲು ಸಿದ್ಧ. ನೀವು ಬಲಿಷ್ಠರಾದರೆ ನಾವು ಬಲಿಷ್ಠರಾಗಲು ಸಾಧ್ಯ. ನೀವೆಲ್ಲರೂ ಕರ್ನಾಟಕದ ಪ್ರಗತಿಯ ಪಾಲುದಾರರು, ರಾಯಭಾರಿಗಳು. ಈ ರಾಜ್ಯ ಹಾಗೂ ದೇಶದ ಪ್ರಗತಿಗೆ ನಾವು ನಿಮ್ಮ ಜೊತೆ ಕೆಲಸ ಮಾಡಲಿದ್ದೇವೆ. ನಾವೆಲ್ಲರೂ ಒಂದೇ ತಂಡ ‘ಟೀಮ್ ಕರ್ನಾಟಕ’. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಜತೆಗೂಡುವುದು ಆರಂಭ, ಜತೆಗೂಡಿ ಆಲೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು” ಎಂದು ತಿಳಿಸಿದರು.
ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ 1.5 ಲಕ್ಷ ಕೋಟಿ ವೆಚ್ಚ
“ಬೆಂಗಳೂರಿನಲ್ಲಿ ಪ್ರತಿ ತಿಂಗಳು 30 ಸಾವಿರ ಹೊಸ ವಾಹನಗಳು ನೋಂದಣಿಯಾಗುತ್ತಿವೆ. ಹೀಗಾಗಿ ನಾವು ಸುಗಮ ಸಂಚಾರಕ್ಕೆ ಆದ್ಯತೆ ನೀಡುತ್ತಿದ್ದೇವೆ. ನಾವು ಈಗಾಗಲೇ 350 ಕಿ. ಮೀ ಮೆಟ್ರೋ ಸಂಪರ್ಕಕ್ಕೆ ಯೋಜನೆ ರೂಪಿಸಿದ್ದು, ಇದನ್ನು ಮುಂದಿನ ವರ್ಷದ ವೇಳೆಗೆ 500 ಕಿ.ಮೀ ಗಳಿಗೆ ವಿಸ್ತರಿಸುವ ಗುರಿ ಹೊಂದಿದ್ದೇವೆ.
ನೀವೆಲ್ಲರೂ ಹೆಬ್ಬಾಳ ಬಳಿ ಸಂಚಾರ ದಟ್ಟಣೆ ಸಮಸ್ಯೆ ಎದುರಿಸುತ್ತಿದ್ದೀರಿ. ಈಗಾಗಿ ನಾವು ಸಣ್ಣ ಟನಲ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಜೊತೆಗೆ ಬೆಂಗಳೂರಿನಲ್ಲಿ 40 ಕಿ. ಮೀ ಉದ್ದದ ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು, ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ಆದಷ್ಟು ಬೇಗ ಆದೇಶ ಹೊರಡಿಸಲಾಗುವುದು. ಇವುಗಳ ಜೊತೆಗೆ 44 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಯೋಜನೆ ರೂಪಿಸಿದ್ದೇವೆ. 133 ಕಿ.ಮೀ ಉದ್ದದ ಮೇಲ್ಸೇತುವೆ ಯೋಜನೆ ರೂಪಿಸಿದ್ದೇವೆ. ಜೊತೆಗೆ 123 ಕಿ. ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ನಿರ್ಮಾಣ ಮಾಡುತ್ತಿದ್ದೇವೆ. ಮೊದಲ ಹಂತಕ್ಕೆ ನಾವು 26 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದೇವೆ. ಹೀಗೆ ಬೆಂಗಳೂರಿನ ಪ್ರಗತಿಗೆ ಮುಂದಾಗಿದ್ದೇವೆ. ಬೆಂಗಳೂರಿನ ಅಭಿವೃದ್ಧಿಗೆ 1.5 ಲಕ್ಷ ಕೋಟಿ ವೆಚ್ಚ ಮಾಡುತ್ತಿದ್ದೇವೆ” ಎಂದು ಮಾಹಿತಿ ನೀಡಿದರು.


